
ಗದಗ,ಮಾ.9: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಯೋಜನೆಗಳ ಹಾಗೂ ನಕಲಿ ಕಾರ್ಡ್ ರದ್ದತಿ ಪ್ರಚಾರ ಮಾಡುವ ವಾಹನಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ. ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕಟ್ಟಡ ಮತ್ತು ಇತರೆ ನಿರ್ಮಣ ಕಾರ್ಮಿಕರಲ್ಲದವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುತ್ತಿರುವ ಅನರ್ಹರನ್ನು ಗುರುತಿಸಿ ಅವರ ಕಾರ್ಡ್ ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರವು ಈಗಾಗಲೇ ಅವಧಿ ಸೂಚಿಸಲಾಗಿತ್ತು. ನಕಲಿ ಕಾರ್ಡ್ ರದ್ದತಿ ಆಭಿಯಾನದ ಕುರಿತು ಹಾಗೂ ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಸೌಲಭ್ಯಗಳ ಕುರಿತಂತೆ ಪ್ರತಿ ಪ್ರಾದೇಶಿಕ ವ್ಯಾಪ್ತಿಯಲ್ಲಿ 2 ವೀಡಿಯೋ ಚಿತ್ರಣದ ಮೂಲಕ ಜನರಿಗೆ ನಕಲಿ ಕಾರ್ಮಿಕರ ರದ್ದತಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಬಿ.ಆರ್. ಜಾಧವ್ ಅವರು ಮಾತನಾಡಿ ಇಲಾಖೆಯ ಚಟುವಟಿಕೆಯನ್ನು ಅನುಷ್ಠಾನಗೊಳಸಲು ಆಗಮಿಸುವ ವಾಹನಗಳು ಜಿಲ್ಲೆಯಾದ್ಯಂತ ಆಯ್ದ ಗ್ರಾಮಗಳಲ್ಲಿ 30 ದಿನಗಳ ಕಾಲ ಪ್ರಚಾರ ನಡೆಸಲಿವೆ. ಸಾರ್ವಜನಿಕರು ಹಾಗೂ ಇಲಾಖಾಧಿಕಾರಿಗಳು ಅಗತ್ಯ ನೆರವನ್ನು ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಸಂದೇಶ ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.