ನಕಲಿ ಇಡಿ ಹೆಸರಿನಲ್ಲಿ ಉದ್ಯಮಿ ಸುಲಿಗೆ

ನವದೆಹಲಿ, ನ.೧೮- ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಸ್ಪೆಷಲ್-೨೬ ರೀತಿಯಲ್ಲಿಯೇ ನಕಲಿ ಇಡಿ ಸಮನ್ಸ್ ಸೃಷ್ಟಿಸಿ ಉದ್ಯಮಿಯನ್ನು ಸುಲಿಗೆ ಮಾಡುತ್ತಿದ್ದ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ.

ಅಸ್ಸಾಂ ರೈಫಲ್ಸ್ ಹೆಡ್ ಕಾನ್ ಸ್ಟೇಬಲ್ ಸೇರಿದಂತೆ ಒಂಬತ್ತು ಜನರ ಖತರ್ನಾಕ್ ಗ್ಯಾಂಗ್ ನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ಬಂಧಿಸಿದ್ದು, ದೆಹಲಿ ಮೂಲದ ವಕೀಲ ಸೇರಿದಂತೆ ಇನ್ನೂ ಕೆಲವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ರವೀಂದ್ರ ಯಾದವ್ ತಿಳಿಸಿದ್ದಾರೆ.

ಹಣವನ್ನು ಸುಲಿಗೆ ಮಾಡಲು ಮುಖ್ಯ ಆರೋಪಿಯು ತಾನು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ನಕಲಿ ಇಡಿ ಸಮನ್ಸ್ ಸೃಷ್ಟಿಸುವ ಮೂಲಕ ಭಯ ಸೃಷ್ಟಿಸಿದ್ದ ಮತ್ತು ಇಡಿ ಅಧಿಕಾರಿಗಳಂತೆ ನಟಿಸುತ್ತಿದ್ದ ವ್ಯಕ್ತಿಗಳು ಮತ್ತು ಕಂಪನಿ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದ ಎಂದು ಅವರು ಮಾಹಿತಿ ನೀಡಿದರು.

ಈ ಸಂಬಂಧ ೯ ವ್ಯಕ್ತಿಗಳ ಗ್ಯಾಂಗ್ ಬಂಧಿಸಲಾಗಿದೆ. ಶೀಘ್ರದಲ್ಲೇ ಇತರರನ್ನು ಬಂಧಿಸಲಾಗುವುದು ಎಂದು ರವೀಂದ್ರ ಯಾದವ್ ಮಾಹಿತಿ ನೀಡಿದರು.