ನಕಲಿ ಆಸ್ತಿ ಪತ್ರ ಸೃಷ್ಟಿಸಿ ವಂಚನೆ:ತಹಶೀಲ್ ಕಚೇರಿ ಸಿಬ್ಬಂದಿ ಸೇರಿ ಐವರ ವಿರುದ್ಧ ಪ್ರಕರಣ

ಕಲಬುರಗಿ,ಜು.23-ನಕಲಿ ಸೇಲ್ ಡೀಡ್ ಆಧರಿಸಿ ಆಸ್ತಿ ವರ್ಗಾವಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಬ್ರಹ್ಮಪುರ ಪೆÇಲೀಸ್ ಠಾಣೆಯಲ್ಲಿ ಮೂವರು ತಹಶೀಲ್ ಕಚೇರಿ ಸಿಬ್ಬಂದಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಆಶಾ ವೆಂಕಟೇಶ್ ಎಂಬುವರು ದೂರು ನೀಡಿದ್ದು, ಸರ್ವೆ ನಂ. 5ರ ಕೃಷಿ ಜಮೀನು ತಮಗೆ ಸೇರಿದ್ದಾಗಿದೆ. ಆದರೆ ತಮ್ಮ ಹೆಸರು ತೆಗೆದು ಹಾಕಿ 2005ರಲ್ಲಿ ನಕಲಿ ಸೇಲ್ ಡೀಡ್ ತಯಾರಿಸಿ, 2012ರಲ್ಲಿ ಸರೋಜನಿ ಮತ್ತು ಅವರ ದಿವಂಗತ ಪತಿ ತಿಮ್ಮಪ್ಪ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಲಾಗಿದೆ ಎಂದು ಆಶಾ ದೂರಿನಲ್ಲಿ ತಿಳಿಸಿದ್ದಾರೆ.
ತಹಶೀಲ್ ಕಚೇರಿಯ ಶಿರಸ್ತೆದಾರ ದೇವೆಂದ್ರ ನಾಡಿಗೇರ್, ಕಂದಾಯ ನಿರೀಕ್ಷಕ ರಾಜಶೇಖರ್ ಭಂಡೆ, ಕ್ಲರ್ಕ್ ರಾಹುಲ್, ಸರೋಜನಿ ಮತ್ತು ಮಹೇಶ್ ಎಂಬುವರ ವಿರುದ್ಧ ಮೋಸ, ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿರುವ ಆರೋಪದ ಮೇಲೆ ದೂರು ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.