ನಕಲಿ ಆಧಾರ್ ಮುದ್ರಿಸಿ ವಂಚನೆ ಖದೀಮರ ಬಂಧನ

ಬೆಂಗಳೂರು,ಜ.೪-ಪಾನ್‌ಕಾರ್ಡ್, ಆಧಾರ್ ಕಾರ್ಡ್, ಆರ್ ಸಿ ಬುಕ್ ಸೇರಿದಂತೆ ಮಹತ್ವದ ದಾಖಲೆಗಳನ್ನು ನಕಲಿಯಾಗಿ ಮುದ್ರಿಸಿ ವಂಚಿಸುತ್ತಿದ್ದ ಬೃಹತ್ ಜಾಲ ಭೇದಿಸಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು ೧೦ಮಂದಿಯ ಖತರ್ನಾಕ್ ಗ್ಯಾಂಗ್ ನ್ನು ಬಂಧಿಸಿದ್ದಾರೆ.
ಗ್ಯಾಂಗ್ ನ ಬಂಧಿತ ಆರೋಪಿಗಳು ಸರ್ಕಾರ ಹಾಗೂ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೋನೋಗ್ರಾಮ್ ಬಳಸಿ ಆಧಾರ್ ಕಾರ್ಡ್, ಪಾನ್‌ಕಾರ್ಡ್, ಚುನಾವಣೆಯ ಗುರುತಿನ ಚೀಟಿ, ವಾಹನಗಳ ಆರ್‍ಸಿ ಬುಕ್‌ಗಳು ಸೇರಿದಂತೆ ಅನೇಕ ದಾಖಲೆಗಳನ್ನು ನಕಲಿ ಮಾಡುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಹತ್ವದ ದಾಖಲೆಗಳನ್ನು ನಕಲಿಯಾಗಿ ಮುದ್ರಿಸಿ ವಂಚಿಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ಕನಕಪುರ ರಸ್ತೆಯ ಗುಬ್ಬನಾಳ ಗ್ರದ ೮೦ ಅಡಿ ರಸ್ತೆಯಲ್ಲಿನ ನಿತ್ಯ ಹೆರಿಟೇಜ್ ಅಪಾರ್ಟ್‌ಮೆಂಟ್ ಪ್ಲಾಟ್ ಸಂಖ್ಯೆ ೧೦೧ರ ಮೇಳೆ ದಾಳಿ ನಡೆಸಿದಾಗ ಮಾಲೀಕ ಕಮಲೇಶ್ ಕುಮಾರ್ ಭವಾಲಿಯ(೩೩) ಸರ್ಕಾರ ಅಧಿಕೃತವಾಗಿ ವಿತರಿಸಬೇಕಾಗಿದ್ದ ಕಾರ್ಡ್‌ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದರು.
ಸಿಕ್ಕಿಬಿದ್ದ ೧೦ ಮಂದಿ:
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ನೀಡಿದ ಮಾಹಿತಿ ಮೇರೆಗೆ ಪುಟ್ಟೇನಹಳ್ಳಿ ಮುಖ್ಯರಸ್ತೆಯ ೬ನೇ ಹಂತದ ಎಸ್.ಲೋಕೇಶ್ (೩೭), ಶಾಂತಿನಗರದ ಆಂಡ್ರೆ ರಸ್ತೆಯ ಸುದರ್ಶನ್ (೫೦), ಇದೇ ಪ್ರದೇಶದ ನಿರ್ಮಲ್‌ಕುಮಾರ್ (೫೬), ಕೆಂಗೇರಿಯ ಹರ್ಷಾ ಲೇಔಟ್‌ನ ದರ್ಶನ್ (೨೫), ಹಾಸನ ಜಿಲ್ಲೆ ಬೈಪಾಸ್ ರಸ್ತೆಯ ಗವೇನಹಳ್ಳಿಯ ಶ್ರೀಧರ್ (೩೧), ಜ್ಞಾನಭಾರತಿಯ ಕೆಂಚನಪುರ ಕ್ರಾಸ್‌ನ ಚಂದ್ರಪ್ಪ (೨೮), ವಿಜಯನಗರದ ಮಾರೇನಹಳ್ಳಿಯ ಅಭಿಲಾಷ್ (೨೭), ಸರಸ್ವತಿನಗರದ ಶ್ರೀಧರ ದೇಶಪಾಂಡೆ (೩೫), ಬಸವೇಶ್ವರನಗರದ ಸತ್ಯನಾರಾಯಣ ಲೇಔಟ್‌ನ ತೇಜಸ್(೩೦) ನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಈ ಆರೋಪಿಗಳು ಸರ್ಕಾರದ ಮಹತ್ವದ ದಾಖಲೆಗಳಾದ ಪಾನ್‌ಕಾರ್ಡ್, ಆಧಾರ್‍ಕಾರ್ಡ್, ರೇಷನ್‌ಕಾರ್ಡ್, ಡಿಎಲ್‌ಗಳಷ್ಟೇ ಅಲ್ಲದೆ ವಾಹನಗಳ ಆರ್‍ಸಿ ಬುಕ್‌ಗಳನ್ನು ನಕಲಿಯಾಗಿ ತಯಾರಿಸುತ್ತಿದ್ದರು.
ಕಳ್ಳತನವಾಗಿದ್ದ ವಾಹನಗಳಿಗೆ ಎಂಜಿನ್ ನಂಬರ್ ನಮೂದಿಸಿ ನಕಲಿ ಆರ್‍ಸಿ ಬುಕ್‌ಗಳನ್ನು ತಯಾರು ಮಾಡಿಕೊಡುತ್ತಿದ್ದರು. ಬ್ಯಾಂಕ್ ಸಾಲ ಪಡೆಯಲು ಈ ನಕಲಿ ದಾಖಲಾತಿಗಳನ್ನು ಬಳಕೆ ಮಾಡಲಾಗುತ್ತಿತ್ತು ಎಂದು ವಿವರಿಸಿದರು.
ರೋಸ್ ಮಾರ್ಟ್ ನಲ್ಲಿ ಕೆಲಸ:
ಆರೋಪಿ ಲೋಕೇಶ್ ಹಾಗೂ ಮತ್ತಿತರರು ಸರ್ಕಾರಿ ದಾಖಲೆಗಳನ್ನು ಮುದ್ರಿಸಿಕೊಡುವ ಗುತ್ತಿಗೆ ಕಂಪೆನಿಯಾದ ರೋಸ್‌ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದುಅಲ್ಲಿಗೆ ಬಂದ ಡಾಟಾವನ್ನು ಕದ್ದು ಪರ್ಯಾಯವಾಗಿ ಇವರುಗಳೇ ಕಾರ್ಡ್‌ಗಳನ್ನು ಮುದ್ರಿಸಿ ವಿತರಣೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದಲೂ ಆರೋಪಿಗಳು ಈ ಕೆಲಸ ಮಾಡುತ್ತಿದ್ದು, ಸಾಕಷ್ಟು ನಕಲಿ ದಾಖಲಾತಿಗಳನ್ನು ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಹೇಳಿದರು.
ಬಂಧಿತರಿಂದ ಹೆಸರು, ವಿಳಾಸ ನಮೂದಿಸದೇ ಇರುವ ಸರ್ಕಾರದ ಮೋನೋಗ್ರಾಮ್ ಹೊಂದಿರುವ ತಲಾ ೯ ಸಾವಿರ ಆಧಾರ್ ಮತ್ತು ಪಾನ್ ಕಾರ್ಡ್‌ಗಳು, ೧೨೦೦ ರೇಷನ್ ಕಾರ್ಡ್‌ಗಳು, ಹೆಸರು, ವಿಳಾಸ ಮುದ್ರಿಸಿರುವ ೨೫೦ ನಕಲಿ ಆರ್‍ಸಿ ಬುಕ್‌ಗಳು, ೬೨೪೦ ನಕಲಿ ಚುನಾವಣಾ ಗುರುತಿನ ಚೀಟಿಗಳು, ಹೆಸರು , ವಿಳಾಸ ನಮೂದಿಸದೇ ಇರುವ ೨೮ ಸಾವಿರ ಚುನಾವಣಾ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಇವುಗಳನ್ನು ಮುದ್ರಿಸಲು ಬಳಸುತ್ತಿದ್ದ ಮೂರು ಲ್ಯಾಪ್‌ಟಾಪ್, ಮೂರು ಪ್ರಿಂಟರ್, ೬೭ ಸಾವಿರ ನಗದು ಹಾಗೂ ಒಂದು ಸಿಪಿಯುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ನಕಲಿ ಆರ್ ಸಿ ಬುಕ್:
ಈ ಜಾಲ ಬೆಳಕಿಗೆ ಬಂದ ಬಳಿಕ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಆರೋಪಿಗಳು ಯಾರಿಗೆಲ್ಲಾ ನಕಲಿ ದಾಖಲಾತಿಗಳನ್ನು ಕೊಟ್ಟಿದ್ದಾರೆ. ಕಳ್ಳತನವಾಗಿರುವ ಎಷ್ಟು ವಾಹನಗಳಿಗೆ ನಕಲಿ ಆರ್ ಸಿ ಬುಕ್ ಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ ಎಂದರು.
೨೦೧೮ರಲ್ಲಿ ಅನ್ನಪೂರ್ಣೇಶ್ವರಿನಗರದಲ್ಲಿ ನಡೆದಿರುವ ಅಪರಾಧ ಕೃತ್ಯದಲ್ಲೂ ಈ ಆರೋಪಿಗಳ ಪಾತ್ರ ಇರುವುದಾಗಿ ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಆಯುಕ್ತರು ಹೇಳಿದರು.
ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.

ಬಂಧಿತ ಗ್ಯಾಂಗ್ ನಿಂದ ಹೆಸರು, ವಿಳಾಸ ನಮೂದಿಸದ ಸರ್ಕಾರದ ಮೋನೋಗ್ರಾಮ್ ಹೊಂದಿರುವ ತಲಾ ೯ ಸಾವಿರ ಆಧಾರ್ ಮತ್ತು ಪಾನ್ ಕಾರ್ಡ್‌ಗಳು, ೧೨೦೦ ರೇಷನ್ ಕಾರ್ಡ್‌ಗಳು, ಹೆಸರು, ವಿಳಾಸ ಮುದ್ರಿಸಿರುವ ೨೫೦ ನಕಲಿ ಆರ್ ಸಿ ಬುಕ್‌ಗಳು, ೬೨೪೦ ನಕಲಿ ಚುನಾವಣಾ ಗುರುತಿನ ಚೀಟಿಗಳು, ಹೆಸರು , ವಿಳಾಸ ನಮೂದಿಸದೇ ಇರುವ ೨೮ ಸಾವಿರ ಚುನಾವಣಾ ಗುರುತಿನ ಚೀಟಿಗಳು ಹಾಗೂ ಅವುಗಳನ್ನು ಮುದ್ರಿಸಲು ಬಳಸುತ್ತಿದ್ದ ಮೂರು ಲ್ಯಾಪ್‌ಟಾಪ್, ಮೂರು ಪ್ರಿಂಟರ್, ೬೭ ಸಾವಿರ ನಗದು ಹಾಗೂ ಒಂದು ಸಿಪಿಯುವನ್ನು ವಶಪಡಿಸಿಕೊಳ್ಳಲಾಗಿದೆ.

ಸಂದೀಪ್ ಪಾಟೀಲ್, ಜಂಟಿ ಪೊಲೀಸ್ ಆಯುಕ್ತ