ನಂಬಿದ ತತ್ವ ಪಾಲಿಸಿಕೊಂಡು ಬಂದರೆ ಜೀವನದಲ್ಲಿ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ

ಕಲಬುರಗಿ:ಜು.2: ತತ್ವಗಳ ಬಗ್ಗೆ ಗಟ್ಟಿ ನಿಲುವು, ಅದರ ಕುರಿತು ಯಾವುದೇ ಹೊಂದಾಣಿಕೆ ಇಲ್ಲವೇ ರಾಜಿ ಮಾಡಿಕೊಳ್ಳದೆ, ನಂಬಿದ ತತ್ವವನ್ನು ಪಾಲಿಸಿಕೊಂಡು ಬಂದರೆ ಜೀವನದಲ್ಲಿ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ ಎಂದು ನೆಲೋಗಿ ವಿರಕ್ತಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ಬಸವ ಮಂಟಪದಲ್ಲಿ ಭಾನುವಾರ ಜರುಗಿದ ಗುರುಬಸವ ಸೇವಾ ಪ್ರತಿಷ್ಠಾನ ದ್ವಿತೀಯ ವಾರ್ಷಿಕೋತ್ಸವ ಹಾಗೂ ಶರಣರಾದ ಬಸವರಾಜ ನಾಗೂರ ಸ್ಮರಣೋತ್ಸವ, ಫ.ಗು.ಹಳಕಟ್ಟಿ ಅವರ ಜಯಂತಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ವಿತರಣೆ ಸಮಾರಂಭದ ಸನ್ನಿಧಾನ ವಹಿಸಿ ಮಾತನಾಡಿ, ಹಿಡಿತ ತತ್ವದಲ್ಲಿ ನಂಬಿಕೆಯಿಟ್ಟು ಮುನ್ನೆಡೆದರೆ ಯಶಸ್ಸು ಸಿಕ್ಕೆ ಸಿಗುತ್ತದೆ ಎಂದರು.
ಹೆತ್ತವರ ಋಣ ತೀರಿಸಲು ಆಗಲ್ಲ. ಆದರೆ, ಮಕ್ಕಳು ತಂದೆ ತಾಯಿ ಹೆಸರಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿಸುವ ಕೆಲಸ ಮಾಡಬೇಕು. ಅಂತಹ ಮಾದರಿ ಕೆಲಸವನ್ನು ನಾಗೂರು ಪರಿವಾರದವರು ಗುರುಬಸವ ಸೇವಾ ಪ್ರತಿಷ್ಠಾನ ಹುಟ್ಟು ಹಾಕಿ, ಅದರಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾದರಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬಸವಣ್ಣವರು ಸ್ಥಾಪಿಸಿದ ಲಿಂಗಾಯತ ಧರ್ಮ ಮೊದಲಿನಿಂದಲೂ ಇದೆ. ಇಂದಲ್ಲ, ನಾಳೆ ಅದಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ವ್ಯಕ್ತಿ ಬರಲಿದ್ದಾನೆ. ಆ ಕೆಲಸ ಆಗಲಿದೆ. ಅದರಿಂದ ಇಡಿ ಲಿಂಗಾಯತರಿಗೆ ಅನುವು ಆಗಲಿದೆ ಎಂದು ಶ್ರೀಗಳು ನುಡಿದರು. ಲಿಂಗಾಯತ ಧರ್ಮ ಸರ್ವಶ್ರೇಷ್ಠ ಸಂಸ್ಕøತಿ ಹೊಂದಿರುವ ಶ್ರೇಷ್ಠ ಧರ್ಮವಾಗಿದೆ. ಮುಂದಿನ ದಿನಗಳಲ್ಲಿ ಇಡಿ ವಿಶ್ವವೇ ಬಸವ ತತ್ವ ಪಾಲಿಸಲಿದೆ ಎಂದು ನುಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಸಸಿಗೆ ನಿರೇರೆದು ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನ ಅಧ್ಯಕ್ಷ ಶರಣಬಸಪ್ಪ ನಾಗೂರ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತಿಗಳಾದ ಡಾ. ಡಾ.ಸುನೀತಾ ಗುಮ್ಮಾ ಅವರು ಕಾಯಕ ದಾಸೋಹ ಕುರಿತು ಉಪನ್ಯಾಸ ನೀಡಿ, ಬಸವ ತತ್ವದಿಂದ ಮತ್ತು ದಾಸೋಹ ಭಾವನೆಯಿಂದಲೇ ಸಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಜೇವರ್ಗಿ ಬಸವ ಕೇಂದ್ರ ಮುಖ್ಯಸ್ಥ ಶರಣಬಸವ ಕಲ್ಲಾ, ಶರಣ ಸಾಹಿತ್ಯ ಪರಿಷತ್ ಅದ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಪ್ರತಿಷ್ಠಾನ ಕಾರ್ಯದರ್ಶಿ ರವೀಂದ್ರ ಶಾಬಾದಿ, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಆರ್.ಜಿ.ಶೆಟಗಾರ ಇತರರು ಮಾತನಾಡಿದರು.
ಸಮಾರಂಭದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಮತ್ತು ಅಗ್ರಿಕಲ್ಚರ್ ಓದುತ್ತಿರುವ ಬಡಪ್ರತಿಭಾವಂತ ವಿದ್ಯಾರ್ಥಿಗಳಾದ ಮೇಘಾ, ಅಂಬರೀಶ, ಉಮಾಶ್ರೀ, ಜಯಶ್ರೀ, ಪ್ರಭಾಕರ ಸೇರಿ 6 ವಿದ್ಯಾರ್ಥಿಗಳಿಗೆ ಪ್ರತಿಷ್ಠಾನ ವತಿಯಿಂದ ಶುಲ್ಕ ಭರಿಸಲು ಆರ್ಥಿಕ ನೆರವು ನೀಡಿ ಪೂಜ್ಯರು ಸನ್ಮಾನಿಸಿದರು. ವಿದ್ಯಾರ್ಥಿಗಳು ಈ ನೆರವು ತಮ್ಮ ಕಲಿಕೆಗೆ ಸಹಕಾರಿಯಾಗಿದೆ ಎಂದು ಪ್ರತಿಸ್ಪಂದನಾ ನುಡಿಗಳನ್ನಾಡಿದರು. ದಾಸೋಹಿಗಳನ್ನು ಗೌರವಿಸಲಾಯಿತು.

ಪ್ರಮುಖರಾದ ಮಾತಾಜಿ ಗೋಳಾ, ಬಸವರಾಜ ಪರಶೆಟ್ಟಿ, ಶಿವಕುಮಾರ ಶಾಬಾದಿ,ಬಸವಪ್ರಭು ಶಾಬಾದಿ, ವಿಜಯಲಕ್ಷ್ಮೀ ಪಾಟೀಲ್, ಶಾರದಾ ಜಾಕಾ, ಮಹಾದೇವಿ ಪಾಟೀಲ್, ರಜನಿ ಶಾಬಾದಿ, ಕವಿತಾ ನಾಗೂರ, ಶಿವಶಂಕರ ನಾಗೂರ, ಶಿವಲಿಂಗಮ್ಮ ನಾಗೂರ, ಚಂದ್ರಶೇಖರ ಪಾಟೀಲ್, ನಾಗನಾಥ ಭರಶೆಟ್ಟಿ, ಸುಭಾಷ ಹಳ್ಳಿಖೇಡಕರ್, ರಮೇಶ ಕಡಾಳೆ ಸೇರಿದಂತೆ ಅನೇಕರಿದ್ದರು.

ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂಬ ಹೋರಾಟ ನಡೆಸುವ ಬದಲಿಗೆ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೊಡಿ. ಒಬಿಸಿಯಲ್ಲಿ ಅನೇಕ ಸಮುದಾಯದವರಿದ್ದಾರೆ. ಹೀಗಾಗಿ ಲಿಂಗಾಯತು ಅದರಲ್ಲಿ ಸೇರಿದರೂ ಸವಲತ್ತು ಸಿಗುವುದು ಕಷ್ಟ. ಹೀಗಾಗಿ ಪ್ರತ್ಯೇಕ ಧರ್ಮವಾದರೆ ಮಾತ್ರ ಹೆಚ್ಚಿನ ಸರ್ಕಾರಿ ಸವಲತ್ತು ಲಭಿಸಲಿವೆ.

| ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಜಿಗಳು ವಿರಕ್ತ ಮಠ ನೆಲೋಗಿ

ಬಸವಾದಿ ಶgರಣರ ವಚನಗಳಲ್ಲಿ ಸಮಾಜ ಎದುರಿಸುವ ಎಲ್ಲ ಸಮಸ್ಯೆಗಳಿಗೂ ಪರಿಹಾರಗಳಿವೆ.ಬಸವ ಧರ್ಮ ಸಕಲರಿಗೆ ಲೇಸು ಬಯಸುತ್ತದೆ. ಕಲಬೇಡ ಕೊಲಬೇಡ ವಚನದಲ್ಲಿ ಸಂವಿಧಾನದ ಆಶಯ ಅಡಗಿದೆ. ವಚನ ಸಂಸ್ಕøತಿ ಮಕ್ಕಳಲ್ಲಿ ಬೆಳೆಸಬೇಕು. ಶರಣರ ಶ್ರೇಷ್ಠ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಬಸವಾದಿ ಶರಣ ವಚನ ಸಾಹಿತ್ಯ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಬಸವಾದಿ ಶರಣರ ಎಲ್ಲ ವಚನಗಳನ್ನು ವಿಶ್ವವ್ಯಾಪ್ತಿಗೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಾಗಿದೆ.
| ಬಾಬುರಾವ ಯಡ್ರಾಮಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಕಕ್ಷ