ನಂಬಿಕೆ- ಪಾರದರ್ಶಕತೆ ಯಿಂದ ವೈದ್ಯ ರೋಗಿಯ ಸಂಬಂಧ ವೃದ್ಧಿ: ಡಾ. ವಿಕ್ರಂ ಸಿದ್ದಾರೆಡ್ಡಿ

ಕಲಬುರಗಿ,ಜೂ.28: ವೈದ್ಯರು ರೋಗಿಯ ಬಗ್ಗೆ ಅತಿವ ಕಾಳಜಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿರುವಾಗ ನಂಬಿಕೆ ಮತ್ತು ಪಾರದರ್ಶಕತೆ, ವೈದ್ಯ ಮತ್ತು ರೋಗಿಯ ನಡುವಿನ ಸಂಬಂಧವನ್ನು ವೃದ್ಧಿಗೊಳಿಸುತ್ತದೆ ಎಂದು ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಕ್ರಂ ಸಿದ್ದಾರೆಡ್ಡಿ ಅವರು ಹೇಳಿದರು.
ಕಲ್ಬುರ್ಗಿ ಆಕಾಶವಾಣಿಯಲ್ಲಿ ವೈದ್ಯ ದಿನಾಚರಣೆಯ ಪ್ರಯುಕ್ತ ಜೂನ್ 28ರಂದು ಏರ್ಪಡಿಸಿದ “ಜೊತೆ ಜೊತೆಯಲಿ” ನೇರ ಫೋನ್ ಇನ್ ಸಂವಾದದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ವೈದ್ಯಕೀಯ ಸೇವೆ ಅದು ವ್ಯಾಪಾರವಲ್ಲ ರಂಗವಲ್ಲ,ಸೇವಾ ಕ್ಷೇತ್ರವಾಗಿದ್ದು ವೈದ್ಯರು ಕರ್ತವ್ಯ ಬದ್ದತೆಯೊಂದಿಗೆ ರೋಗಿಯನ್ನು ನೋಡುತ್ತಿದ್ದಾರೆ. ವೈದ್ಯಕೀಯ ಸೇವೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡು ರೋಗಿಯ ನಂಬಿಕೆ ಉಳಿಸಿಕೊಂಡು ಕರ್ತವ್ಯ ನಿರ್ವಹಿಸುತ್ತೇವೆ. ರೋಗಿಯು ವೈದ್ಯರ ಸಲಹೆಯನ್ನು ಏಕಾಏಕಿ ಒಪ್ಪ ಬೇಕಿಲ್ಲ. ತಮ್ಮ ಕುಟುಂಬ ವೈದ್ಯರ ಅಥವಾ ಇತರ ವೈದ್ಯರ ಜತೆ ಚರ್ಚಿಸಿ ಎರಡನೇ ಅಭಿಪ್ರಾಯವನ್ನು ಕೂಡ ಪಡೆದು ಚಿಕಿತ್ಸೆ ಮುಂದುವರಿಸಬಹುದು. ಇತ್ತೀಚಿನ ದಿನಗಳಲ್ಲಿ ರೋಗಿಯ ಚಿಕಿತ್ಸೆಗಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಆರೋಗ್ಯ ಯೋಜನೆಗಳು ಅನುಕೂಲಕರವಾಗಿದ್ದು ನಾಗರಿಕರು ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಮೆ ಮಾಡಿಸಿಕೊಳ್ಳುವುದರ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ ಎಂದು ಸಲಹೆ ನೀಡಿದರು ಮತ್ತು ವೈದ್ಯರ ನಡುವಿನ ಸಂಬಂಧ ಸುಧಾರಣೆಗೆ ಜಾಗೃತಿಯ ಅಗತ್ಯವಿದ್ದು ಎಲ್ಲಾ ದೃಷ್ಟಿಯಿಂದಲೂ ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕಡು ಬಡವರ ವೈದ್ಯೋಪಚಾರದ ವೆಚ್ಚ ಭರಿಸಲು ದಾನಿಗಳಿಂದ ಕ್ರೋಢೀಕರಣ ಕೆಲಸ ಕೂಡಾ ನಡೆಯುತ್ತಿದೆ ಎಂದು ಡಾ. ವಿಕ್ರಂ ಸಿದ್ದಾರೆಡಿ ತಿಳಿಸಿದರು. ಕಾರ್ಯಕ್ರಮವನ್ನು ಸೋಮಶೇಖರ್ ರುಳಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸೋಮನಾಥ ರೆಡ್ಡಿ ಪುರಮ್ಮ ಕಲಬುರ್ಗಿ ರವಿ ಭೀಮಸೇನ್ ರಾವ್ ಕುಲಕರ್ಣಿ ಅಳಂದ ವೈಜಾಪುರದ ವಾಸುದೇವ ಪಾಟೀಲ್, ಅಫ್ಜಲಪುರದ ಸಿದ್ದರಾಮ ಕಂಬಾರ್, ಪ್ರವೀಣ್ ಕುಲಕರ್ಣಿ ಚಂದ್ರಕಾಂತ್ ಸುರಪುರ ದ ರಾಘವೇಂದ್ರ ಭಕ್ರಿ ಪಾಲ್ಗೊಂಡರು. ಲಕ್ಷ್ಮಿಕಾಂತ್ ಪಾಟೀಲ್ ನೆರವಾದರು. ಪ್ರಭು ನಿಷ್ಠಿ ಮತ್ತು ಗಿರೀಶ್ ತಾಂತ್ರಿಕ ನೆರವು ನೀಡಿದರು ಎಂದು ಆಕಾಶವಾಣಿ ಪ್ರಕಟಣೆ ತಿಳಿಸಿದೆ.