ನಂಬಿಕೆಯ ಆಧಾರದ ಮೇಲೆ ಬೀಜ ಉದ್ಯಮದ ಅಸ್ತಿತ್ವ

ಬಾಗಲಕೋಟೆ,ನ.29 : ಯಾವುದೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಸಾರ್ಥಕತೆ ಬರುವುದು ಅವು ಕೊಟ್ಟಂತಹ ಹೊಸ ತಳಿಗಳ, ಬಿತ್ತನೆ ಬೀಜಗಳ ಬಿಡುಗಡೆಯಿಂದ. ತೋವಿವಿಯು ಇಲ್ಲಿಯವರೆಗೆ 50-60 ತಳಿಗಳನ್ನು ಬಿಡುಗಡೆ ಮಾಡಿದೆ. ಬಿಡುಗಡೆಯ ಜೊತೆಗೆ ಅವುಗಳ ಅಭಿವೃದ್ಧಿ ಮತ್ತು ಬೀಜೋತ್ಪಾದನೆ ಪ್ರಮುಖವಾಗಿವೆ. ನಂತರ ಅವುಗಳನ್ನು ರೈತರಿಗೆ ತಲುಪಿಸುವ ಕಾರ್ಯ ಅಷ್ಟೇ ಮುಖ್ಯವಾಗಿದೆ. ಬೀಜೋತ್ಪಾದನೆಗೆ ವಿಶಾಲವಾದ ಕ್ಷೇತ್ರವಿರಬೇಕು. ಇದಕ್ಕಾಗಿ ವಿಶ್ವವಿದ್ಯಾಲಯದ ಜೊತೆಗೆ ರೈತರು ಸಹ ಕೈಜೋಡಿಸಬೇಕಾಗುತ್ತದೆ. ಸರ್ಕಾರಿ ಸ್ವಾಮ್ಯ ಸಂಸ್ಥೆಗಳು ಏಕಾಂಗಿಯಾಗಿ ಈ ಕೆಲಸ ಕೈಗೊಳ್ಳು ಸಾಧ್ಯವಿಲ್ಲ. ವಿಜ್ಞಾನಿನಗಳ ಸಲಹೆಯೊಂದಿಗೆ ಬೀಜ ಬೆಳೆಗಾರರು ಉತ್ಪಾದನೆ ಮಾಡುತ್ತಿದ್ದಾರೆ. ಭಾರತದಲ್ಲಿ ಬೀಜೋದ್ಯಮ ಅಧಿಕವಾಗಿ ಬೆಳೆಯಲು ಬೀಜದ ಮೇಲಿನ ನಂಬಿಕೆಯೇ ಕಾರಣ. ರೈತರು-ಬೀಜ ಉತ್ಪಾದಕರನ್ನು ನಂಬಿರುತ್ತಾರೆ. ಬೀಜ ಉತ್ಪಾದಕರಲ್ಲಿ ಬೀಜ ಬೆಳೆಗಳನ್ನು ನಂಬಿರುತ್ತಾರೆ ಎಂದು ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಡಾ. ಆರ್. ಸಿ. ಜಗದೀಶ ಮಾತನಾಡಿದರು.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ನಬಾರ್ಡ್ ಸಹಯೋಗದಲ್ಲಿ ನಡೆದ ‘ಬದಲಾದ ಹವಾಮಾನದಲ್ಲಿ ಬೀಜೋದ್ಯಮ ಕುರಿತು ಜರುಗಿದ ರಾಷ್ಟ್ರ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಲ್ಲಿ ಶೇ. 7 ರಷ್ಟು ಬೀಜ ಉದ್ಯಮವಾಗಿ ಬೆಳವಣಿಗೆಯಾದರೆ ಮತ್ತು ಭಾರತದಲ್ಲಿ ಶೇ.12ರಷ್ಟು ಬೆಳವಣಿಗೆ ಆಗುತ್ತಿದೆ. ಶೇ.80 ರಷ್ಟು ರೈತರು ಸ್ವತಃ ತಾವೇ ಬೀಜೋತ್ಪಾದನೆ ಮಾಡಿದರೆ, ಬೀಜ ಉದ್ಯಮದಿಂದ ಶೇ. 20 ರಷ್ಟು ಮಾಡಲಾಗುತ್ತಿದ್ದು, ಇತ್ತೀಚೆಗೆ ಇದರ ಪ್ರಮಾಣ ಶೇ.30 ರಷ್ಟು ಹೆಚ್ಚಾಗಿದೆ. ವೈವಿಧ್ಯಮಯ ವಾತಾವರಣ ಬಳಸಿಕೊಂಡು ಗುಣಮಟ್ಟದ ಬೀಜಗಳನ್ನು ಉತ್ಪಾದಿಸಿ ರಫ್ತು ಮಾಡುವುದು ಅವಶ್ಯವಿದೆ. ಬೀಜೋತ್ಪಾದನೆಗೆ ಪ್ರಮಾಣೀಕರಣ ಮುಖ್ಯವಾಗಿದೆ. ಇಂದು ಹೊಸ ಹೊಸ ತಂತ್ರಜ್ಞಾನಗಳು, ಪ್ರಯೋಗಾಲಯಗಳು ಬಂದಿವೆ. ಬೀಜ ಸಂರಕ್ಷಣೆ, ಪ್ಯಾಕಿಂಗ್ ಇವುಗಳ ಬಗ್ಗೆ ಮುತುವರ್ಜಿ ವಹಿಸಬೇಕಾಗಿದೆ. ಮಾರುಕಟ್ಟೆಯ ಸವಾಲು ನಮ್ಮ ಕಣ್ಣ ಮುಂದಿದೆ. ಎಲ್ಲಾ ಸ್ಥಳೀಯ ತಳಿಗಳನ್ನು ಬೀಜ ಬ್ಯಾಂಕ್‍ನಲ್ಲಿ ಸಂರಕ್ಷಿಸಡಬೇಕಾಗುತ್ತದೆ. ಸ್ಟ್ರಾಟ್ ಅಪ್ ಕಂಪನಿಗಳಿಗೆ ಬೀಜ ಉದ್ಯಮ ಒಂದು ಉತ್ತಮ ಅವಕಾಶವಿದೆ. ಇದನ್ನು ಇಂದಿನ ಯುವಜನಾಂಗ ಕೌಶಲ್ಯಗಳನ್ನು ಬಳಸಿಕೊಂಡು ಮುಂದುವರಿಯಬೇಕಾಗಿದೆ ಎಂದು ವಿವರಿಸಿದರು.
ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಡಾ. ಶಿವಮೂರ್ತಿ ಅತಿಥಿ ಭಾಷಣದಲ್ಲಿ ಗುಣಮಟ್ಟದ ಬೀಜೋತ್ಪಾದನೆ ಅವಶ್ಯವಾಗಿದೆ. ಪರಂಪರಾಗತ ಕೃಷಿಯು ಹೊರಗಿನ ಬೀಜಗಳಿಗೆ ಅವಲಂಬಿತವಾಗಿರಲಿಲ್ಲ. ಆದರೆ ಇಂದು ವಿಶ್ವವಿದ್ಯಾಲಯ ಅಲ್ಲದೆ ಖಾಸಗಿ ಸಂಸ್ಥೆಗಳು ಬೀಜೋತ್ಪಾದನೆಯ ಜವಾಬ್ದಾರಿಯನ್ನು ಹೊತ್ತಿವೆ ಎಂದರು.
ಈ ಸಂದರ್ಭದಲ್ಲಿ ತಾಂತ್ರಿಕ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಬಸವನ ಬಾಗೇವಾಡಿ ತಾಲೂಕಿನ ಮುತ್ತಿಗೆಯ ಫಲುಂದಾ ರೈತ ಉತ್ಪಾದಕ ಸಂಸ್ಥೆಯನ್ನು ಅದರ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯ ಮೂಲಕ ತೋವಿವಿಯ ಬೀಜ ಘಟಕವು ಬೀಜೋತ್ಪಾದನೆಗಾಗಿ ದತ್ತು ಪಡೆಯಲಾಯಿತು.
ಅಧ್ಯಕ್ಷೀಯ ಸಮಾರೋಪ ಭಾಷಣ ಮಾಡಿದ ತೋವಿವಿಯ ಗೌರವಾನ್ವಿತ ಕುಲಪತಿ ಡಾ. ಎನ್.ಕೆ. ಹೆಗಡೆ ಅವರು ಕೃಷಿಯಲ್ಲಿ ಬೀಜ ಅತ್ಯಂತ ಪ್ರಮುಖ ಮೂಲಭೂತ ಅವಶ್ಯಕತೆ ಆಗಿದೆ. ವಿಶ್ವವಿದ್ಯಾಲಯದ ಬೀಜ ಘಟಕವು ಈರುಳ್ಳಿ, ಮೆಣಸಿನಕಾಯಿ, ನುಗ್ಗೆ ತಳಿಗಳ ಬೀಜಗಳನ್ನು ಉತ್ಪಾದಿಸಿ ರೈತರಿಗೆ ಒದಗಿಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಟಿ.ಬಿ.ಅಳ್ಳೊಳ್ಳಿ, ಕುಲಸಚಿವರು, ಡಾ. ಎಲ್.ಎನ್. ಹೆಗಡೆ, ವಿಸ್ತರಣಾ ನಿರ್ದೇಶಕರು, ಡಾ. ರವೀಂದ್ರ ಮುಲಗೆ, ಡೀನ್, ಸ್ನಾತಕೋತ್ತರ, ಡಾ. ರಾಮಚಂದ್ರ ನಾಯ್ಕ, ಡೀನ್, ವಿದ್ಯಾರ್ಥಿ ಕಲ್ಯಾಣ, ಡಾ. ರಾಮೇಗೌಡ, ಉಪಾಧ್ಯಕ್ಷರು, ಇಂಡಿಯನ್ ಸೊಸಾಯಟಿ ಆಫ್ ಸೀಡ್ ಟೆಕ್ನಾಲಜಿ, ಶ್ರೀ ಮಂಜುನಾಥ ರೆಡ್ಡಿ, ನಬಾರ್ಡ್, ಡಾ. ಬಾಪುರಾಯನಗೌಡ ಪಾಟೀಲ, ಡಾ. ಶಿವಯೋಗಿ ರ್ಯಾವಳದ, ಬೇರೆಬೇರೆ ವಿಶ್ವವಿದ್ಯಾಲಯದ ಪ್ರತಿನಿಧಿಗಳು, ಉದ್ಯಮಿದಾರರು, ವಿದ್ಯಾರ್ಥಿಗಳು, ರೈತರು ಭಾಗಿಯಾಗಿದ್ದರು.
ಡಾ. ಲೋಕೇಶ್. ಎಂ.ಎಸ್. ವಿಶೇಷಾಧಿಕಾರಿಗಳು, ಬೀಜ ಘಟಕ ಸ್ವಾಗತಿಸಿದರು. ಡಾ. ಹೆಚ್.ಪಿ. ಮಹೇಶ್ವರಪ್ಪ, ಸಂಶೋಧನಾ ನಿರ್ದೇಶಕರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ಡಾ. ಶಾಂತಪ್ಪ, ಡೀನ್, ತೋಮವಿ, ಶಿರಸಿ ವಂದಿಸಿದರು. ಡಾ. ಪಲ್ಲವಿ.ಎಚ್.ಎಮ್. ನಿರೂಪಿಸಿದರು.