ನಂದಿಹಳ್ಳಿ ಜೆ. ಗ್ರಾಮಕ್ಕೆ ರಸ್ತೆ ಡಾಂಬರೀಕರಣ, ಸೇತುವೆ ನಿರ್ಮಿಸದಿದ್ದರೆ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಯಾದಗಿರಿ, ಮಾ.05: ಜಿಲ್ಲೆಯ ಶಹಾಪೂರ ತಾಲ್ಲೂಕಿನ ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯ ನಂದಿಹಳ್ಳಿ ಜೆ. ಗ್ರಾಮಕ್ಕೆ ಹೋಗುವ ಪ್ರಮುಖ ರಸ್ತೆ ಡಾಂಬರಿಕರಣ ಮತ್ತು ಹಳ್ಳದ ಸೇತುವೆ ಮಾಡದಿದ್ದಲ್ಲಿ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಗ್ರಾಮದ ಆಂಜಿನೇಯ ದೇವಸ್ಥಾನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಈ ಹಿಂದೆ ಹಲವು ವರ್ಷಗಳಿಂದ ಮನವಿ ಮಾಡಿದರೂ ಯಾರೊಬ್ಬರೂ ಸ್ಪಂದಿಸದೇ ಇರುವುದರಿಂದ ಈ ನಿರ್ಣಯ ಕೈಗೊಳ್ಳುವುದು ಅನಿವಾರ್ಯವಾಯಿತು ಎಂದು ಸಭೆಗೆ ತಿಳಿಸಿದರು.

ಈ ಸಭೆಗೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಸಮಾಜಿಕ ಕಾರ್ಯಕರ್ತ ಉಮೇಶ ಕೆ. ಮುದ್ನಾಳ, ಗ್ರಾಮದ ಹೊರವಲಯದಲ್ಲಿರುವ ಹಳೆ ಕಾಲದ ಹಳ್ಳದ ಕೆಳ ಸೇತುವೆ ಇತ್ತಿಚೆಗೆ ಹೆಚ್ಚಿನ ಮಳೆ ಬಂದು ಹಾಗೂ ಕಾಲುವೆ ನೀರು ಹರಿದು ಬಂದು ಗ್ರಾಮಸ್ಥರಿಗೆ ಹಳ್ಳ ದಾಟಲು ಆಗದೇ ಪರದಾಡುತ್ತಿದ್ದಾರೆ.

ಕೂಡಲೇ ಕ್ರಮ ಕೈಗೊಂಡು ಹಳೆ ಕೆಳ ಸೇತುವೆಯನ್ನು ಮೇಲ್ಸೇತುವೆಯನ್ನಾಗಿ ಮಾಡಬೇಕು ಮತ್ತು ಗ್ರಾಮದಿಂದ ಹತ್ತಿಗುಡುರ ವರೆಗಿನ 6 ಕಿ.ಮಿ. ಮುಖ್ಯ ರಸ್ತೆಯನ್ನು ಡಾಂಬರೀಕರಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

ಕೇವಲ ಆರು ಕಿ.ಮೀ. ರಸ್ತೆ ದುರಸ್ತಿ ಹಾಗು ಸೇತುವೆ ನಿರ್ಮಿಸಿದಲ್ಲಿ ಗ್ರಾಮದ ಮಹಿಳೆಯರು, ವಿದ್ಯಾರ್ಥಿಗಳು, ರೋಗಿಗಳು ಸೇರಿದಂತೆ ಎಲ್ಲರೂ ಹತ್ತಿಗುಡೂರು ತಲುಪಿ ಅಲ್ಲಿಂದ ಮುಂದೆ ಸಾಗಲು ಅನುವಾಗುತ್ತದೆ.

ಈ ಹಿಂದೆ ಸುಮಾರು ವರ್ಷಗಳಿಂದ ರಸ್ತೆ ಇರದ ಕಾರಣ ಬಸ್, ಅಂಬುಲೆನ್ಸ ಬಾರದೇ ಇರುವುದರಿಂದ ಜನತೆಗೆ ಸಂಕಷ್ಟ ಉಂಟಾಗಿದೆ. ರಸ್ತೆಯ ಅವಸ್ಥೆಯ ಕಾರಣ ಬಸ್ ಓಡಿಸಲಾಗುವುದಿಲ್ಲ ಎಂದು ಸಾರಿಗೆ ಸಂಸ್ಥೆಯವರು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.

ಮಳೆ ಬಂದ ಹಿನ್ನೆಲೆಯಲ್ಲಿ ರಸ್ತೆ ಬಹುತೇಕ ಕಡೆ ಕೊಚ್ಚಿ ಹೋಗಿದ್ದು ರಸ್ತೆ ಮೇಲೆ ಸಾಕಷ್ಟು ಅವಘಡಗಳು ಸಂಭವಿಸಿದ್ದು ದ್ವಿಚಕ್ರ ವಾಹನ ಟ್ರ್ಯಾಕ್ಟರ್ ಆಟೋಗಳು ಅಪಘಾತಕ್ಕೀಡಾಗಿ ಅನೇಕ ತೊಂದರೆಗಳಾಗಿವೆ, ಹೆರಿಗೆ ಸಮಯದಲ್ಲಿ ಅಂಬುಲೆನ್ಸ್ ಬಾರದೇ ಖಾಸಗಿ ವಾಹನಗಳು ಇಲ್ಲವೇ ಎತ್ತಿನ ಬಂಡಿಯನ್ನು ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ.

ಇದಲ್ಲದೇ 70 ಲಕ್ಷ ರೂ. ರಸ್ತೆಗೆ ಮಂಜೂರಾಗಿದ್ದರೂ ಮದ್ಯದಲ್ಲಿ ಕೇವಲ ಒಂದು ಕಿ.ಮೀ.ಗೂ ಕಮ್ಮಿ ರಸ್ತೆಯನ್ನು ಮಾತ್ರ ನಿರ್ಮಿಸುತ್ತಿದ್ದು ಇದು ಅವೈಜ್ಞಾನಿಕವಾಗಿದೆ. ಹತ್ತಿಗುಡೂರು ಇಲ್ಲವೇ ನಂದಿಹಳ್ಳಿಯ ಕಡೆಯಿಂದ ಆರಂಭಿಸಬೇಕಿತ್ತು ಆದರೆ ಇದಾವುದನ್ನು ಮಾಡದೇ ಮದ್ಯದಲ್ಲಿ ರಸ್ತೆ ನಿರ್ಮಿಸುವ ಅವೈಜ್ಞಾನಿಕ ಕಾರ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ ಕೂಡಲೇ ಕ್ರಮ ಕೈಗೊಂಡು ರಸ್ತೆ ಡಾಂಬರೀಕರಣ ಮಾಡಬೇಕು ಮತ್ತು ಸೇತುವೆ ನಿರ್ಮಿಸಬೇಕು ಇಲ್ಲವಾದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮರೆಪ್ಪ, ಬಸವರಾಜ, ಸಾಬಣ್ಣ, ಶರಣಪ್ಪ, ದೇವಪ್ಪ, ಮಲ್ಕಪ್ಪ, ಬಸವರಾಜಪ್ಪಗೌಡ, ಅಜಿತಕುಮಾರ, ಬಂಡೆಪುರ ಸ್ವಾಮಿ, ಖಾಸಿಮ್ ಸಾಬ, ಸೋಪಣ್ಣ, ನಬಿಸಾಬ, ಶರಣಪ್ಪ, ಭೀಮರಾಯ, ದೇವಪ್ಪ, ಮಲ್ಲಪ್ಪ, ಬಸವಂತ್ರಾಯ, ಅಯ್ಯಾಳಪ್ಪ, ದೇವಪ್ಪ, ಮಲ್ಲೇಶಿ, ನಿಂಗಪ್ಪ, ಬಸಪ್ಪ, ಪೀರಸಾಬ, ಶಂಭುಲಿಂಗ, ಭೀಮರಾಯ, ಪರಶುರಾಮ ಸೇರಿದಂತೆ ಅನೇಕರು ಮಹಿಳೆಯರು ಮತ್ತು ಶಾಲಾ ಮಕ್ಕಳು ಇನ್ನಿತರರು ಉಪಸ್ಥಿತರಿದ್ದರು.