ನಂದಿಲ ರಾಜಕಾಲುವೆ ಹರಿವಿಗೆ ತಡೆ..! ಭತ್ತ ಬೇಸಾಯದ ಕೃಷಿಗೆ ಕಂಟಕ

ಪುತ್ತೂರು, ಡಿ.೧೯- ಪುತ್ತೂರು ನಗರದ ಹೊರವಲಯದಲ್ಲಿ ಸಾಂಪ್ರದಾಯಿಕ ಭತ್ತದ ಬೇಸಾಯವನ್ನು ಉಳಿಸಿಕೊಂಡು ಬರುತ್ತಿರುವ ಕೃಷಿಕರ ಪಾಲಿಗೆ ಇದೀಗ ಸಮಸ್ಯೆ ಉಂಟಾಗಿದೆ. ಸುಮಾರು ೧೫೦ಕ್ಕೂ ಹೆಚ್ಚು ವರ್ಷದಿಂದ ಚಿಕ್ಕಪುತ್ತೂರು ಕೃಷಿ ಪ್ರದೇಶಕ್ಕೆ ನೈಸರ್ಗಿಕ ನೀರು ಸರಬರಾಜಾಗುತ್ತಿದ್ದ ಐತಿಹಾಸಿಕ ನಂದಿಲ ರಾಜಕಾಲುವೆ ನೀರಿನ ಹರಿಯುವಿಕೆಗೆ ತಡೆಯೊಡ್ಡಿದ್ದರಿಂದ ಚಿಕ್ಕಪುತ್ತೂರಿನ ೧೫ ಎಕರೆ ನಾಟಿ ಮಾಡಿದ ಗದ್ದೆಗೆ ನೀರು ಸ್ಥಗಿತಗೊಂಡಿದೆ.
ಪುತ್ತೂರಿನ ಆದರ್ಶ ರೈಲು ನಿಲ್ದಾಣದಿಂದ ೫೦ಮೀ. ದೂರವಿರುವ ಚಿಕ್ಕಪುತ್ತೂರು ಪ್ರದೇಶ ಗ್ರೀನ್‌ಝೋನ್ ವ್ಯಾಪ್ತಿಯಲ್ಲಿದ್ದು, ಇಲ್ಲಿ ಈಗಲೂ ಭತ್ತದ ಬೆಳೆಯನ್ನು ಬೆಳೆಯಲಾಗುತ್ತಿದೆ. ಪ್ರಸ್ಥುತ ೨೫ ಎಕರೆ ವ್ಯಾಪ್ತಿಯಲ್ಲಿ ೧೫ ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ ಗದ್ದೆಯಿದ್ದು, ಇಲ್ಲಿಗೆ ಐತಿಹಾಸಿಕ ನಂದಿಲ ರಾಜಕಾಲುವೆಯಿಂದಲೇ ನೈಸರ್ಗಿಕ ನೀರು ಹರಿದುಬರುತ್ತಿದೆ. ಆದರೆ ಈ ಪ್ರದೇಶಕ್ಕೆ ಸಂಬಂಧ ಪಡದ ಖಾಸಗಿ ವ್ಯಕ್ತಿಯೋರ್ವ ಸ್ಥಳೀಯಾಡಳಿತಕ್ಕೆ ಯಾವುದೇ ಸೂಚನೆ ನೀಡದೆ ಏಕಾಏಕಿ ನಂದಿಲ ರಾಜಕಾಲುವೆ ನೀರಿನ ಹರಿಯುವಿಕೆಗೆ ತ್ಯಾಜ್ಯ ಮಣ್ಣುಹಾಕಿ ತಡೆಯೊಡ್ಡಿದ್ದರಿಂದ ಇಲ್ಲಿನ ಕೃಷಿಕರ ಭತ್ತ ಬೆಸಾಯಕ್ಕೆ ತೊಂದರೆಯಾಗಿದೆ.
ರಾಜಕಾಲುವೆ ಬಂದ್
ನಂದಿಲ ರಾಜಕಾಲುವೆಯು ವಿವೇಕಾನಂದ ಕಾಲೇಜಿನಿಂದ ಆರಂಭವಾಗಿ ಪುತ್ತೂರಿನ ಆದರ್ಶ ರೈಲು ನಿಲ್ದಾಣ, ಚಿಕ್ಕ ಪುತ್ತೂರು, ಶ್ರೀ ಮಹಲಿಂಗೇಶ್ವರ ದೇವಸ್ಥಾನದ ಹರಿದು ನಗರದಲ್ಲಿರುವ ಬೃಹತ್ ಎಳ್ಮುಡಿ ತೋಡಿಗೆ ಸಂಪರ್ಕ ಹೊಂದಿದೆ. ಚಿಕ್ಕ ಪುತ್ತೂರು ವ್ಯಾಪ್ತಿಯಲ್ಲಿ ಈ ನೀರು ವಿಶಾಲ ಕೃಷಿ ಭೂಮಿ ಮೂಲಕ ಹರಿಯುವುದರಿಂದ ವಾಸನೆ, ಸೊಳ್ಳೆ ಕಾಟವಿದೆ ಎಂದು ಸ್ಥಳೀಯ ನಿವಾಸಿ ಈ ಕಾಲುವೆ ನೀರಿನ ಹರಿಯುವಿಕೆಗೆ ತಡೆ ನೀಡಿ ಬಂದ್ ಮಾಡಿದ್ದಾರೆ ಎಂದು ಚಿಕ್ಕಪುತ್ತೂರಿನ ಕೃಷಿಕರು ಪುತ್ತೂರು ನಗರಠಾಣೆಗೆ ದೂರು ನೀಡಿದ್ದಾರೆ.
ಒಣಗುತ್ತಿದೆ ನಾಟಿ ಪೈರು
ನಂದಿಲ ರಾಜಕಾಲುವೆ ನೀರಿಗೆ ತಡೆಯೊಟ್ಟಿದ್ದರಿಂದ ಕಳೆದ ೨ ದಿನಗಳಿಂದ ಚಿಕ್ಕಪುತ್ತೂರು ವ್ಯಾಪ್ತಿಯಲ್ಲಿ ೧೫ ಎಕರೆ ನಾಟಿ ಮಾಡಿದ ಗದ್ದೆಗಳು ಒಣಗಿ ಹೋಗುತ್ತಿದೆ. ರಾಜಕಾಲುವೆಗೆ ತಡೆಯೊಡ್ಡಿದ್ದ ಬಗ್ಗೆ ಹಾಗೂ ನೀರಿನ ಸರಾಗ ಹರಿಯುವಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಕೃಷಿಕರು ನಗರಸಭೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಕೃಷಿಕರ ಆರೋಪ.

ಚಿಕ್ಕಪುತ್ತೂರು ಕೃಷಿ ಪ್ರದೇಶಕ್ಕೆ ನೈಸರ್ಗಿಕ ನೀರು ಸರಬರಾಜಾಗುತ್ತಿದ್ದು, ಈ ನೀರಿನ ಮೂಲಕವೇ ಚಿಕ್ಕಪುತ್ತೂರಿನ ಗದ್ದೆಗಳಲ್ಲಿ ಬೇಸಾಯ ಕಾರ್ಯ ನಡೆಸಲಾಗುತ್ತಿತ್ತು. ಆದರೆ ನಂದಿಲ ರಾಜಕಾಲುವೆ ನೀರಿಗೆ ನವೀನ್ ಎಂಬ ವ್ಯಕ್ತಿಯೋರ್ವ ತಡೆಯೊಡ್ಡಿದ್ದರಿಂದ ೧೫ ಎಕರೆ ನಾಡಿ ಮಾಡಿದ ಗದ್ದೆಗೆ ನೀರಿಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು. ಭತ್ತದ ಗದ್ದೆಗೆ ನೀರು ಸರಬರಾಜು ಆಗಬೇಕು- | ಅಂಗಾರ ಪಿ. ಚಿಕ್ಕಪುತ್ತೂರು,
ಗದ್ದೆ ಬೇಸಾಯ ಮಾಡಿದ ಕೃಷಿಕ