ನಂದಿನಿ ಹಾಲು ರಕ್ಷಿಸಿ, ರಸಗೊಬ್ಬರ ಬೆಲೆ ಏರಿಕೆ ಧಿಕ್ಕರಿಸಿ ಪ್ರತಿಭಟನೆ

ಕಲಬುರಗಿ :ಏ.12: ನಂದಿನಿ ಹಾಲು ರಕ್ಷಿಸುವಂತೆ ಹಾಗೂ ರಸಗೊಬ್ಬರ ಬೆಲೆ ಏರಿಕೆಯನ್ನು ತಡೆಯುವಂತೆ ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಅಮೂಲ್ ನೆಪದಲ್ಲಿ ರೈತಾಪಿ ಹೈನುಗಾರಿಕೆ ನಿರ್ಮೂಲನೆಗೆ ಸಂಚು ಮಾಡಿದ್ದು, ನಂದಿನಿ ಹಾಲು ರೈತರ ಹಿತ ಕಾಪಾಡುವಂತೆ ಹಾಗೂ ರಸಗೊಬ್ಬರ ಬೆಲೆಯನ್ನು ಧಿಡೀರನೇ 700ರೂ.ಗಳಿಗೆ ಏರಿಕೆ ಮಾಡಿರುವುದನ್ನು ವಿರೋಧಿಸಿದರು.
ಇಡೀ ದೇಶದಲ್ಲಿಯೇ ಹೈನುಗಾರಿಕೆ ಉತ್ಪಾದನೆ ಹಾಗೂ ಸಹಕಾರಿ ಸಂಸ್ಕರಣೆ ಅನುಪಾತ ಗರಿಷ್ಠ ಪ್ರಮಾಣದಲ್ಲಿರುವ ರಾಜ್ಯದ ರೈತಾಪಿ ಹೈನುಗಾರಿಕೆಯನ್ನು ಸರ್ವನಾಶ ಮಾಡಲು, ಡೈರಿ ಕ್ಷೇತ್ರದ ಕಾರ್ಪೋರೇಟೀಕರಣ ಸಾಧಿಸಲು ಆಸ್ಟ್ರೇಲಿಯಾ, ಡೆನ್ಮಾರ್ಕ್, ನ್ಯೂಜಿಲೆಂಡ್ ಮುಂತಾದ ಯುರೋಪಿಯನ್ ದೇಶಗಳ ಡೈರಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಅಮೂಲ್ ಹೆಸರಿನ ಮರೆಯಲ್ಲಿ ನಡೆಯುತ್ತಿರುವ ಬಹುದೊಡ್ಡ ಹುನ್ನಾರವನ್ನು ಹಿಮ್ಮೆಟ್ಟಿಸಬೇಕು ಎಂದು ಅವರು ಒತ್ತಾಯಿಸಿದರು.
ಲಾಭದಾಯಕ ದರವನ್ನು ನಿಗದಿಪಡಿಸುವಂತೆ ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಂತೆ ನಿರಂತರವಾಗಿ ರಾಜ್ಯದ ಹಾಲು ಉತ್ಪಾದಕರು ಪ್ರತಿಭಟನೆ, ಹೋರಾಟಗಳನ್ನು ಮಾಡಿದರೂ ಸಹ ನಿರ್ಲಕ್ಷಿಸಿದ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೆಎಂಎಫ್‍ನ 16 ಜಿಲ್ಲಾ ಹಾಲು ಒಕ್ಕೂಟಗಳ ಮಾರುಕಟ್ಟೆ ಕಸಿಯಲು ಟೊಂಕ ಕಟ್ಟಿ ನಿಂತಿರುವುದು ಹಾಗೂ ಚುನಾವಣಾ ಸಂದರ್ಭದಲ್ಲೂ ನಿರ್ಲಜ್ಜವಾಗಿ ಸಮರ್ಥಿಸುತ್ತಿರುವುದು ಅತ್ಯಂತ ನಾಚಿಕೆಗೇಡು ಮಾತ್ರವಲ್ಲ ರೈತರನ್ನು ನಾಶ ಮಾಡುವ ಸರ್ವಾಧಿಕಾರಿ ಠೇಂಕಾರ ಎಂದು ಅವರು ಟೀಕಿಸಿದರು.
ಭಾರತದ ಡೈರಿ ಉತ್ಪನ್ನಗಳ ಮಾರುಕಟ್ಟೆಯ ಒಟ್ಟು ಗಾತ್ರ ಸುಮಾರು 12 ಲಕ್ಷ ಕೋಟಿ ರೂ.ಗಳಷ್ಟಿದೆ. ದೇಶದ ಎರಡು ಬೃಹತ್ ಡೈರಿ ಸಹಕಾರಿ ಸಂಸ್ಥೆಗಳ ವಹಿವಾಟು ಸುಮಾರು ಅರ್ಧ ಲಕ್ಷ ಕೋಟಿಯಷ್ಟು ಮಾತ್ರ ಇದೆ. ದೇಶೀಯ ಸಹಕಾರಿ ಹೈನುಗಾರಿಕೆ ಬೆಳವಣಿಗೆ ಇಷ್ಟು ವಿಫುಲ ವಾದ ಅವಕಾಶಗಳಿದ್ದರೂ ವಹಿವಾಟು ಗಾತ್ರದಲ್ಲಿ ಸಣ್ಣದಾಗಿರುವುದಕ್ಕೆ ಕೆಎಂಎಫ್‍ನಂತಹ ಸಹಕಾರಿ ಸಂಸ್ಥೆಗಳನ್ನು ನಾಶ ಮಾಡಿ ಕೇಂದ್ರೀಕರಣವನ್ನು ಉತ್ತೇಜಿಸುವುದು ಹಾಗೂ ಕಾರ್ಪೋರೇಟೀಕರಣ ಸಾಧಿಸುವುದು ಗ್ರಾಮೀಣ ನಿರುದ್ಯೋಗ ಮತ್ತು ಬಡತನವನ್ನು ತೀವ್ರಗೊಳಿಸುತ್ತದೆ ಹಾಗೂ ವಲಸೆ ಮತ್ತು ಆತ್ಮಹತ್ಯೆಗಳನ್ನು ಹೆಚ್ಚಿಸುತ್ತದೆ. ದೊಡ್ಡದಾಗಿ ಆತ್ಮ ನಿರ್ಭರತೆ ಕುರಿತು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ಸರ್ಕಾರ ಕೃಷಿ ಉತ್ಪನ್ನಗಳ ಖಾತರಿ ಖರೀದಿಯ ಮಾದರಿ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ. ಈ ಬಗ್ಗೆ ರಾಜ್ಯದ ಜನರಲ್ಲಿ ವ್ಯಾಪಕ ಪ್ರಚಾರಾಂದೋಲನ ಮಾಡಲಾಗುವುದು ಎಂದು ಅವರು ಹೇಳಿದರು.
ಜಾನುವಾರು ಸಂರಕ್ಷಣೆ ಹೆಸರಿನಲ್ಲಿ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ 2020 ಹಾಗೂ ಬಹು ರಾಜ್ಯಗಳ ಸಹಕಾರಿ ಸಂಘಗಳ ತಿದ್ದುಪಡಿ ಕಾಯ್ದೆ 2022, ಹೈನುಗಾರಿಕೆ ಮೇಲಿನ ಜಿಎಸ್‍ಟಿ ಕ್ರಮಗಳು, ರೈತಾಪಿ ಹೈನುಗಾರಿಕೆಯನ್ನು ನಿರುತ್ಸಾಹಗೊಳಿಸುವ, ಕಾರ್ಪೋರೇಟಿಕರಣವನ್ನು ಉತ್ತೇಜಿಸುವ ಅಂಶಗಳನ್ನು ಒಳಗೊಂಡಿದೆ. ರಾಜ್ಯದಲ್ಲಿ ಹಾಗೂ ಮುಕ್ತವಾಗಿದ್ದ ಜಾನುವಾರು ಸಾಗಾಣಿಕೆ, ಸಾಂಪ್ರದಾಯಿಕ ದನಗಳ ಜಾತ್ರೆಗಳು ಹಲವು ನಿರ್ಬಂಧನೆಗಳನ್ನು ಅನುಭವಿಸುತ್ತಿದ್ದು, ಜಾನುವಾರುಗಳ ಸಂಖ್ಯೆ ಹಾಗೂ ಹಾಲು ಉತ್ಪಾದನೆ ತೀವ್ರವಾಗಿ ಕುಸಿಯುತ್ತಿದೆ. ಅದೇ ಸಂದರ್ಭದಲ್ಲಿ ಜಾನುವಾರು ಮಾಂಸದ ರಫ್ತು ಉದ್ಯಮ ಬಹು ವೇಗವಾಗಿ ಬೆಳೆಯುತ್ತಿದೆ. ಕೃಷಿ ಹಾಗೂ ರೈತ ವಿರೋಧಿಯಾದ ಕೃಷಿ ಕಾಯ್ದೆಗಳನ್ನು ಮತ್ತು ಸಹಕಾರಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಹೈನುಗಾರಿಕೆ ಮೇಲೆ ಹಾಕಿರುವ ಜಿಎಸ್‍ಟಿ ರದ್ದುಪಡಿಸಬೇಕು ಮತ್ತು ರೈತರಿಂದ ಖರೀದಿಸುವ ಲೀಟರ್ ಹಾಲಿಗೆ ಕನಿಷ್ಠ 50ರೂ.ಗಳನ್ನು ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ರಸಗೊಬ್ಬರ ಬೆಲೆ ಏರಿಕೆಯನ್ನು ಧಿಕ್ಕರಿಸಿದ ಅವರು, ಯಾವುದಕ್ಕೆ ಎಷ್ಟು ಪ್ರತಿ 50 ಕೆಜಿ ರಸಗೊಬ್ಬರ ಚೀಲಕ್ಕೆ 1200ರೂ.ಗಳು ಇದ್ದಿರುವುದನ್ನು ಡಿಎಪಿ ಗೊಬ್ಬರ 1900ರೂ.ಗಳಿಗೆ ಹೆಚ್ಚಿಸಲಾಗಿದೆ. ಎನ್‍ಪಿಕೆ 10,26,26 ರಸಗೊಬ್ಬರ ಬೆಲೆ 1175ರೂ.ಗಳನ್ನು 1775ರೂ.ಗಳಿಗೆ ಹೆಚ್ಚಿಸಲಾಗಿದೆ. ಗೊಬ್ ಬರ 12.32.16 ರಸಗೊಬ್ಬರ ಬೆಲೆ 1185ರೂ.ಗಳನ್ನು ದಿಢೀರನೇ 1800ರೂ.ಗಳಿಗೆ, 20,20,20 ರಸಗೊಬ್ಬರ 925ರೂ.ಗಳಿದ್ದುದನ್ನು 1350ರೂ.ಗಳಿಗೆ, ಇಫ್ಕೋ ಕಂಪೆನಿಯ ಗೊಬ್ಬರದ ಬೆಲೆ ಏರಿಕೆಯ ಪ್ರಮಾಣವಾಗಿದ್ದು, ರೈತರ ಮೇಲೆ ಬರೆ ಎಳೆದಂತಾಗಿದೆ. ರೈತರಿಗೆ ಸಹಾಯಧನ ಇಲ್ಲ. ಸಾಲದ ಬಾಧೆ ತಾಳಲಾರದೇ ಸರಣಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದ್ದರಿಂದ ಕೂಡಲೇ ರಸಗೊಬ್ಬರ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ. ಸಾಯಿಬಣ್ಣಾ ಗುಡುಬಾ, ಸುಭಾಷ್ ಹೊಸಮನಿ ಜೇವರ್ಗಿ, ದಿಲೀಪ್‍ಕುಮಾರ್ ನಾಗೂರೆ, ರಾಯಪ್ಪ ಹುರಮುಂಜಿ, ಜಾವೇದ್ ಹುಸೇನ್, ಎಂ.ಬಿ. ಸಜ್ಜನ್, ಮೇಘರಾಜ್ ಕಠಾರೆ, ಭೀಮಶೆಟ್ಟಿ ಯಂಪಳ್ಳಿ ಮುಂತಾದವರು ಪಾಲ್ಗೊಂಡಿದ್ದರು.