ನಂದಿನಿ ಹಾಲು ದರ ೩ ರೂ. ಹೆಚ್ಚಳ ಸಾಧ್ಯತೆ

ಬೆಂಗಳೂರು,ಜ.೧೫- ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರುಗಳು ಪ್ರತಿ ಲೀಟರ್ ಹಾಲಿನ ದರವನ್ನು ೩ ರೂ.ಗೆ ಏರಿಕೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೇಡಿಕೆ ಇಟ್ಟಿದ್ದಾರೆ.
ನಂದಿನಿ ಹಾಲು ೩೭ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದು ದೇಶದಲ್ಲೇ ಅತೀ ಕಡಿಮೆ ದರವಿದೆ. ಆದ್ದರಿಂದ ಪ್ರತಿ ಲೀಟರ್ ಹಾಲಿನ ದರವನ್ನು ೩ ರೂ.ಗಳಿಗೆ ಹೆಚ್ಚಳ ಮಾಡಬೇಕೆಂದು ಹಾಲು ಒಕ್ಕೂಟಗಳು ಸರ್ಕಾರವನ್ನು ಒತ್ತಾಯಿಸಿದೆ.
ಒಂದು ವೇಳೆ ಹಾಲಿನ ದರವನ್ನು ಹೆಚ್ಚಳ ಮಾಡಿದರೆ ಪ್ರತಿ ಲೀಟರ್ ಹಾಲಿನ ದರ ೪೦ ರೂ.ಗಳಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಹೆಚ್ಚಳ ಮಾಡಲಾಗುವ ೩ ರೂ.ಗಳನ್ನು ರೈತರಿಗೆ ನೀಡಲು ಕೆಎಂಎಫ್ ಚಿಂತನೆ ನಡೆಸಿದೆ.