ನಂದಿನಿ ಹಾಲು ಉತ್ಪನ್ನ ಬಳಕೆಗೆ ಸಲಹೆ

ಮಾಲೂರು ಜೂ೧:ಪ್ರತಿಯೊಬ್ಬ ನಾಗರಿಕರು ಉತ್ತಮ ಪೌಷ್ಟಿಕಾಂಶವುಳ್ಳ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸುವದರ ಮೂಲಕ ಆರೋಗ್ಯಕರ ಜೀವನ ನಡೆಸುವಂತೆ ಕೋಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕೋಮುಲ್ ಶಿಬಿರ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹಾಲು ದಿನಾಚರಣೆ ಹಾಗೂ ದಿವಂಗತ ಎಂ.ವಿ.ಕೃಷ್ಣಪ್ಪನವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ಹಾಗೂ ಹೊರರೋಗಿಗಳಿಗೆ ನಂದಿನಿ ಟೆಟ್ರಾ ಹಾಲಿನ ಪ್ಯಾಕೆಟ್ ಹಾಗೂ ಸಿಹಿಯನ್ನು ವಿತರಿಸಿ ಮಾತನಾಡಿದರು.
ಕೆಎಂಎಫ್ ನಂದಿನಿ ಬ್ರಾಂಡ್ ದೇಶ ವಿದೇಶದಲ್ಲಿ ಹೆಸರು ಗಳಿಸಲು ನಮ್ಮ ಜಿಲ್ಲೆಯವರೇ ಆದ ದಿವಂಗತ ಎಂ.ವಿ.ಕೃಷ್ಣಪ್ಪನವರು ಎಂ.ವಿ.ಕೃಷ್ಣಪ್ಪನವರು ಕಟ್ಟಿ ಬೆಳೆಸಿದ ಕೆಎಂಎಫ್ ಹಾಲು ಹಾಗೂ ಹಾಲಿನ ಉತ್ಪನ್ನಗಳು ಇಂದು ದೇಶ ವಿದೇಶದಲ್ಲಿ ಪ್ರಖ್ಯಾತಿ ಪಡೆದಿದೆ. ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಒಂದು ಕೋಟಿ ಲೀಟರ್ ನಷ್ಟು ಹಾಲು ಉತ್ಪಾದನೆ ಆಗುತ್ತಿದೆ. ಅದರಲ್ಲಿ ಕೋಲಾರ ಒಕ್ಕೂಟದಲ್ಲಿ ೧೦ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ ಹಾಲು ಉತ್ಪಾದಕರಿಗೆ ಎಷ್ಟೇ ಕಷ್ಟ ಬಂದರೂ ಹಾಲನ್ನು ಉತ್ಪಾದಿಸುತ್ತಿದ್ದಾರೆ. ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿವೆ. ಅಮೂಲ್ ನಂತರ ನಂದಿನಿ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ. ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಕೋಮುಲ್ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ.ಚೇತನ್, ಜಿಲ್ಲಾ ಡಿಪಿಟಿ ಆರೋಗ್ಯ ಅಧಿಕಾರಿ ಡಾ.ಪ್ರಸನ್ನ, ತಾಲೂಕು ಆರೋಗ್ಯ ಅಧಿಕಾರಿ ಡಾ.ಅಂಬು ಸೇಲ್ವಂ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್, ಪುರಸಭಾ ಸದಸ್ಯರಾದ ಎ.ರಾಜಪ್ಪ, ಭಾರತಿ ಶಂಕರಪ್ಪ, ಕೋಮುಲ್ ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ನಾರಾಯಣಸ್ವಾಮಿ, ಶಿವಕುಮಾರ್, ಮನೋಹರ್, ಕರಿಯಪ್ಪ, ಉಲ್ಲೂರಪ್ಪ, ವೆಂಕಟೇಶ್, ವಕೀಲ ರಮೇಶ್, ಕೊಳಿ ನಾರಾಯಣ್, ಇನ್ನಿತರರು ಹಾಜರಿದ್ದರು.