ನಂದಿನಿ ರಾಷ್ಟ್ರೀಯ ಯುವ ಶಿಬಿರ: ನಗರದ ಕಾಲೇಜಿನ ಎನ್‌ಎಸ್‌ಎಸ್ ತಂಡ ಭಾಗಿ

ರಾಯಚೂರು,ಆ.೧೮- ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿನಿ ಸ್ವಯಂ ಸೇವಕಿಯರ ತಂಡವು ದಿನಾಂಕ ೨೦ ರಿಂದ ೨೪ ನೇ ಆಗಸ್ಟ್ ೨೦೨೩ ರವರಿಗೆ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಜರುಗಲಿರುವ ನಂದಿನಿ ರಾಷ್ಟ್ರೀಯ ಯುವ ಶಿಬಿರದಲ್ಲಿ ಭಾಗವಹಿಸಲಿದೆ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ೧೫೫ ನೇಯ ಹಾಗೂ ಭೂದಾನ ಚಳುವಳಿಯ ನೇತಾರ ಆಚಾರ್ಯ ವಿನೋಬಾ ಭಾವೆಯವರ ೧೨೮ ನೇಯ ಜಯಂತ್ಯೋತ್ಸವ ನಿಮಿತ್ಯ ರಾಷ್ಟ್ರದ ಯುವ ಸಮುದಾಯಕ್ಕೆ ಈ ಈರ್ವರೂ ಮಹನೀಯರ ವಿಚಾರಧಾರೆಗಳ ಆಳವಾದ ಪರಿಚಯ ಮಾಡಿಕೊಡುವ ಮತ್ತು ಉನ್ನತ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಕರ್ನಾಟಕ ಸರಕಾರ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಬೆಂಗಳೂರು, ಕಸ್ತೂರ್ಬಾ ಗಾಂಧಿ ನೇಷನಲ್ ಮೆಮೋರಿಯಲ್ ಟ್ರಸ್ಟ್, ಅರಸೀಕೆರೆ, ವಿನೋಬಾ ವಿಚಾರ್ ಪ್ರವಾಹ, ಶಹಜಾನಪೂರ, ಉತ್ತರ ಪ್ರದೇಶ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಟಿ – ದಾಸರಳ್ಳಿ ಸಹಭಾಗಿತ್ವದಲ್ಲಿ ಆಯೋಜನೆಗೊಳ್ಳಲಿರುವ ಸದರಿ ರಾಷ್ಟ್ರೀಯ ಶಿಬಿರದಲ್ಲಿ ದೇಶ ವಿದೇಶಗಳ ವಿದ್ವಾಂಸರು ಆಗಮಿಸಲಿದ್ದು ವಿಷಯಾಧಾರಿತ ವಿಶೇಷ ಉಪನ್ಯಾಸಗಳು ಹಾಗೂ ಚರ್ಚೆಗಳು ಏರ್ಪಡುವ ಮೂಲಕ ಮಹಾತ್ಮಾ ಗಾಂಧೀಜಿ ಹಾಗೂ ಆಚಾರ್ಯ ವಿನೋಬಾ ಭಾವೆಯವರು ವಿಚಾರಧಾರೆಗಳ ಪ್ರಸ್ತುತತೆಯನ್ನು ಅರಿಯಲು ಮತ್ತು ಅನುಸರಿಸಲು ಸಹಾಯಕವಾಗುವಂತೆ ಶಿಬಿರದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಸದರಿ ರಾಷ್ಟ್ತ್ರೀಯ ಯುವ ಶಿಬಿರದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿನಿ ಸ್ವಯಂ ಸೇವಕಿಯರು ಭಾಗವಹಿಸಲು ಅವಕಾಶ ಪಡೆದಿರುವುದು ಸಂತೋಷದ ಹಾಗೂ ಹೆಮ್ಮೆಯ ವಿಷಯ ಎಂದು ಪ್ರಾಂಶುಪಾಲರಾದ ಡಾ. ಪುಷ್ಪ ಹರ್ಷ ವ್ಯಕ್ತಪಡಿಸಿರುವರು. ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ನೇತೃತ್ವದಲ್ಲಿ ತಂಡವು ಶಿಬಿರದಲ್ಲಿ ಭಾಗವಹಿಸಲಿದ್ದು, ಪ್ರಾಧ್ಯಾಪಕರಾದ ಡಾ. ಪ್ರಸನ್ನಕುಮಾರ್, ಡಾ. ಸುಗುಣಾ, ಡಾ. ಸ್ವರೂಪರಾಣಿ, ಪ್ರೊ. ಉಮಾದೇವಿ, ಡಾ. ಸಯೀದಾ ರಶಿದಾ ಪರ್ವೀನ್, ಡಾ. ಜ್ಯೋತಿ ಸಿ ಕೆ, ಪ್ರೊ. ಶರಣಗೌಡ, ಪ್ರೊ. ರಂಗನಾಥ ಭಿಲ್ಲಾರ್, ಪ್ರೊ. ಭೀಮಾಶಂಕರ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ತಂಡಕ್ಕೆ ಯಶಸ್ಸು ಮತ್ತು ಶುಭಾಶಯ ಕೋರಿರುವರು.