ನಂದಿನಿ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ


ಮಂಗಳೂರು, ಜು.೧೪- ಮಂಡ್ಯ ಮೂಲದ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಯುವಕನೋರ್ವ ಮಂಗಳವಾರ ತಡರಾತ್ರಿ ಪಾವಂಜೆ ನಂದಿನಿ ನದಿಗೆ ಹಾರಿ ಆತ್ಮ‌ಹತ್ಯೆ ಮಾಡಿ ಕೊಂಡಿದ್ದು, ನಿನ್ನೆ ಅಗ್ನಿಶಾಮಕ ದಳ ಸಿಬ್ಬಂದಿ‌ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಮಂಗಳೂರಿನಲ್ಲಿ ಪೋಸ್ಟ್ ಆಫೀಸ್ ಉದ್ಯೋಗಿ ರಾಕೇಶ್ ಗೌಡ ಆತ್ಮಹತ್ಯೆ ಮಾಡಿಕೊಂಡವರೆಂದು ತಿಳಿದು ಬಂದಿದೆ. ಮಂಗಳೂರಿನಿಂದ‌ ಸ್ಕೂಟಿಯೊಂದರಲ್ಲಿ ಬಂದಿದ್ದ ರಾಕೇಶ್ ಗೌಡ ಅವರು, ಸ್ಕೂಟಿಯನ್ನು ರಾ.ಹೆ. 66ರ ಪಾವಂಜೆ ಸೇತುವೆಯ ಮೇಲೆ ಬಿಟ್ಟು ತನ್ನ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಸ್ಕೂಟಿಯ ಒಳಗೆ ಇಟ್ಟು ನಂದಿನಿ ನದಿಗೆ ಹಾರಿದ್ದರು ಎನ್ನಲಾಗಿದೆ. ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಸೇತುವೆಯ ಮೇಲೆ ಸ್ಕೂಟಿ ಬಿದ್ದಿರುವುದನ್ನು ಕಂಡು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಕೂಟಿಯನ್ನು ತಪಾಸಣೆಗೆ ಒಳಪಡಿಸಿದಾಗ ಸ್ಕೂಟಿಯಲ್ಲಿದ್ದ ಮೊಬೈಲ್ ನಿಂದ ತನ್ನ ಇಬ್ಬರು ಸ್ನೇಹಿತರಿಗೆ ಆತ್ಮ ಹತ್ಯೆ ಮಾಡಿಕೊಳ್ಳುವ ವಿಚಾರ ಮತ್ತು ಸ್ಥಳದ ಲೋಕೇಷನ್ ವಾಟ್ಸಾಪ್ ಮೂಲಕ ರವಾನಿಸಿರುವುದು ಪತ್ತೆಯಾಗಿದೆ. ರಾಕೇಶ್ ಗೌಡ ಅವರು ಸಂದೆಶ ಕಳುಹಿಸಿದ್ದ ಸ್ನೇಹಿತನನ್ನು ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. ಈ ಕುರಿತು ಸುರತ್ಕಲ್ ಪೊಲೀಸರು ಪ್ರಕರಣವನ್ನು ಮೂಲ್ಕಿ ಪೊಲೀಸರಿಗೆ ಹಸ್ತಾಂತರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಅಗ್ನಿ ಶಾಮಕ ದಳ ಸಿಬ್ಬಂದಿ ರಾಕೇಶ್ ಗೌಡ‌ ಅವರು ನೀರಿಗೆ ಹಾರಿದ್ದ ಸ್ಥಳದಿಂದಲೇ ಮೃತದೇಹವನ್ನು ಪತ್ತೆ ಹಚ್ಚಿ ಮೇಲೆತ್ತಿದ್ದಾರೆ ಎಂದು ಮೂಲ್ಕಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆತ್ಮ‌ಹತ್ಯೆಯ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.