
ಗುಜರಾತ್,ಏ.೧೧- ಕರ್ನಾಟಕದಲ್ಲಿ ಗುಜರಾತ್‌ನ ಅಮುಲ್ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಹಲವು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಅಭಿಯಾನಗಳು ನಡೆಯುತ್ತಿವೆ. ವಿಧಾನಸಭಾ ಚುನಾವಣೆ ಹತ್ತಿರವಿರುವುದರಿಂದ ಈ ಬಹಿಷ್ಕಾರದ ಕಾವು ಇನ್ನಷ್ಟು ಬಿಸಿಯಾಗಿದೆ.
ಇದರ ಮಧ್ಯೆಯೇ ಗುಜರಾತ್ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಅಮುಲ್ ಹಾಗೂ ನಂದಿನಿ ನಡುವೆ ಉತ್ತಮ ಸಂಬಂಧ ಇದೆ, ಅದು ಮುಂದುವರಿಯುತ್ತದೆ. ಅಮುಲ್ ಹಾಗೂ ನಂದಿನಿ ನಡುವೆ ಸ್ಪರ್ಧೆಯ ಪ್ರಶ್ನೆಯೇ ಇಲ್ಲ. ನಮ್ಮ ಅಮುಲ್ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿರುವುದು ಅಲ್ಲಿನ ನಂದಿನಿ ಬ್ರ್ಯಾಂಡ್ ಜೊತೆ ಸ್ಪರ್ಧಿಸಲು ಅಲ್ಲ. ಸ್ಥಳೀಯ ನಂದಿನಿ ಬ್ರ್ಯಾಂಡ್‌ನೊಂದಿಗೆ ಸೇರಿ, ಒಂದೇ ವೇದಿಕೆಯ ಮೂಲಕ ನಮ್ಮ ಉತ್ಪನ್ನಗಳನ್ನು ನಮ್ಮ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಇದು ನಮ್ಮ ಸಣ್ಣ ಪ್ರಯತ್ನವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.