ನಂದಿನಿ ಐಸ್‌ಕ್ರಿಮ್ ಸವಿದ ರಾಹುಲ್

ಬೆಂಗಳೂರು, ಏ.೧೭- ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮೂಲ್ ನಂದಿನಿ ವಿವಾದ ನಡುವೆ ನಂದಿನಿ ಐಸ್ ಕ್ರೀಂ ಹಾಗೂ ಪೇಡಾ ಸವಿದು ಗಮನ ಸೆಳೆದರು.
ಇಲ್ಲಿನ ಜೆ.ಪಿ.ನಗರದ ನಂದಿನಿ ಪಾರ್ಲರ್‌ಗೆ ಭಾನುವಾರ ಸಂಜೆ ಭೇಟಿ ನೀಡಿದ್ದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರ ನಾಯಕರೊಂದಿಗೆ ನಂದಿನಿ ಬೂತ್‌ನಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪರಿಶೀಲನೆ ಮಾಡಿದರು.
ತಮ್ಮ ಜೊತೆಗಿದ್ದ ಹಲವರಿಗೆ ನಂದಿನಿ ಐಸ್‌ಕ್ರೀಂಗಳನ್ನು ಕೊಡಿಸಿ ಬೂತ್ ಮಾಲೀಕನೊಂದಿಗೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ನಂದಿನಿ ಉತ್ಪನ್ನಗಳು ಎಲ್ಲಿಂದ ಬರುತ್ತವೆ. ಎಷ್ಟು ವರ್ಷದಿಂದ ನೀವು ಈ ಕೆಲಸ ಮಾಡುತ್ತಿದ್ದೀರಿ? ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಂಗಡಿ ಮಾಲೀಕ ಬಳ್ಳಾರಿಯಿಂದ ನಂದಿನಿ ಉತ್ಪನ್ನಗಳು ಬರುತ್ತವೆ ಎಂದರು. ಕೊನೆಗೆ ರಾಹುಲ್ ಗಾಂಧಿ ಅವರೊಂದಿಗೆ ಬೂತ್‌ನ ಮಾಲೀಕ ಫೋಟೋ ಸಹ ತೆಗೆಸಿಕೊಂಡು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವ ವಿಚಾರ ನಂದಿನಿ ಉತ್ಪನ್ನಕ್ಕೆ ಗುಜರಾತ್ ಮೂಲದ ಅಮುಲ್ ಉತ್ಪನ್ನದ ಸ್ಪರ್ಧೆ. ಬೆಂಗಳೂರು ನಗರದ ಕೆಲ ಭಾಗಗಳಿಗೆ ಹಾಲು ಪೂರೈಸುವುದಾಗಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಮುಲ್ ಸಂಸ್ಥೆ ಪ್ರಕಟಿಸಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.