ನಂದಿನಿ ಉಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಏ.11:- ನಂದಿನಿ ಉಳಿಸುವಂತೆ ಒತ್ತಾಯಿಸಿ ಮೈಸೂರು ನಗರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿವಿಪುರಂನ ಅಮೂಲ್ ಮಳಿಗೆ ಎದುರು ಪ್ರತಿಭಟನೆ ನಡೆಯಿತು.
ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ನಮ್ಮ ನೆಲದಲ್ಲಿ ನಮ್ಮನ್ನೇ ಹೊಸಕುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದರ ಮುಂದುವರೆದ ಭಾಗವಾಗಿ ಕನ್ನಡಿಗರ ಹೆಮ್ಮೆಯ ನಂದಿನಿಯನ್ನು ಮುಗಿಸಿ, ಗುಜರಾತಿನ ವಸಾಹತನ್ನಾಗಿ ಮಾಡುವ ಷಡ್ಯಂತ್ರ ಆರಂಭಗೊಂಡಿದೆ. ಹಾಗಾಗಿ ನಂದಿನಿ ಉಳಿಸಲು ನಾವು ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದರು. ಕರ್ನಾಟಕ ನಂದಿನಿ ಹಾಲು ಮತ್ತು ಉತ್ಪನ್ನಗಳು ಕನ್ನಡಿಗರ ಅಸ್ಮಿತೆ. ಇದನ್ನು ನಾಶ ಮಾಡುವ ಹುನ್ನಾರ ಎಂದು ಆರೋಪಿಸಿದರು.
ಹಾಲು ಉತ್ಪಾದಕರ ಸಂಘದ ಮೂಲಕ ನಂದಿನಿ ಒಂದು ದೊಡ್ಡ ಉದ್ಯಮವಾಗಿ ಹೈನುಗಾರಿಕೆಯಾಗಿ ಬೆಳೆದಿದೆ. 14 ನೋಂದಾಯಿತ ಸಂಘಗಳು ಕೆಎಂಎಫ್ ಅಡಿಯಲ್ಲಿ ಬರುತ್ತವೆ. 15043 ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. 70ರಿಂದ 80ಲಕ್ಷ ಹಾಲು ಉತ್ಪಾದನೆ ಪ್ರತಿದಿನ ಆಗುತ್ತದೆ. 8ರಿಂದ 10ಲಕ್ಷ ಲೀಟರ್ ಮೊಸರು ಉತ್ಪತ್ತಿಯಾಗುತ್ತದೆ. 2022ರಲ್ಲಿ 4924 ಸಾವಿರ ಕೋಟಿ ಆದಾಯವನ್ನು ನಂದಿನಿಯಿಂದ ಪಡೆದಿದೆ. 26ಲಕ್ಷ ರೈತ ಕುಟುಂಬ ನಂದಿನಿಯ ಮೇಲೆ ಅವಲಂಬಿತವಾಗಿದೆ. ಇದು ಹೈನುಗಾರಿಕೆಯ ಬೃಯತ್ ಉದ್ದಿಮೆಯಾಗಿ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಇದರ ಮೇಲೆ ಈಗ ಗುಜರಾತಿಗರ ಕಣ್ಣು ಬಿದ್ದಿದೆ. ಅಮುಲ್ ಮೂಲಕ ನಂದಿನಿಯನ್ನು ಮುಳುಗಿಸಲು ಹೊರಟಿದೆ ಎಂದು ಆರೋಪಿಸಿದರು.
ನಂದಿನಿಯನ್ನು ಮುಗಿಸಲು ಹೊರಟಿರುವ ಷಡ್ಯಂತ್ರವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕಸಾಪ ನಗರ ಅಧ್ಯಕ್ಷ ಕೆ.ಎಸ್.ಶಿವರಾಮು, ಪ್ರಗತಿಪರ ಚಿಂತಕ, ಹಿರಿಯ ಪತ್ರಕರ್ತ ಟಿ.ಗುರುರಾಜ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮುಖಂಡರಾದ ಹರೀಶ್ ಗೌಡ, ಎನ್. ಆರ್.ನಾಗೇಶ್, ಹೆಚ್. ಎಸ್.ಪ್ರಕಾಶ್, ರವಿನಂದನ್, ಯೋಗೇಶ್, ಜೆ.ಜೆ.ಆನಂದ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.