ನಂದಿನಿ-ಅಮುಲ್ ವಿಲೀನಗೊಳಿಸದಂತೆ ಆಗ್ರಹಿಸಿ ಪ್ರತಿಭಟನೆ

ಚಾಮರಾಜನಗರ: ಏ.10:- ಕೆಎಂಎಫ್-ನಂದಿನಿಯೊಂದಿಗೆ ಅಮುಲ್ ವಿಲೀನಗೊಳಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ಉದ್ಯಾನದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ರಸ್ತೆ ತಡೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದ ನಂದಿನಿ ಹಾಲು ಮತ್ತು ಉತ್ಪನ್ನಗಳು ಕನ್ನಡಿಗರ ಅಸ್ಮಿತೆ. ನಮ್ಮ ಸ್ವಾಭಿಮಾನದ ಸಂಕೇತ ಇದು. ಈ ನಂದಿನಿ ಹಾಲಿನ ಉತ್ಪನ್ನಗಳ ಮೇಲೆ ರಾಜ್ಯದಲ್ಲಿ ಲಕ್ಷಾಂತರ ರೈತರು, ಅವರು ಕುಟುಂಬ ಅವಲಂಬಿತರಾಗಿದ್ದಾರೆ' ಎಂದರು. ನಂದಿನಿಯನ್ನು ಗುಜರಾತಿನ ಅಮುಲ್‍ನೊಂದಿಗೆ ವಿಲೀನ ಮಾಡಿದರೆ ಲಕ್ಷಾಂತರ ಜನರು ಬೀದಿಪಾಲಾಗುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ವಿಲೀನ ಮಾಡಬಾರದು. ಒಂದು ವೇಳೆ ಮಾಡಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಶಾ.ಮರುಳಿ, ಚಾ.ವೆಂ.ರಾಜ್‍ಗೋಪಾಲ್, ಪಣ್ಯದಹುಂಡಿ ರಾಜು, ಚಾ .ರಾ.ಕುಮಾರ್, ಗು.ಪುರುಷೋತ್ತಮ್, ಮೂರ್ತಿ, ಶಿವರುದ್ರಸ್ವಾಮಿ, ಬಸವಣ್ಣ, ನಂಜಂಡಸ್ವಾಮಿ, ರವಿಚಂದ್ರ ಪ್ರಸಾದ್‍ಕಹಳೆ, ಅಭಿಷೇಕ್, ಸಂಜಯ್, ಶಿವಣ್ಣ, ತಾಂಡವಮೂರ್ತಿ, ಶಿವು ಇದ್ದರು.