ನಂಜಾಣು ರೋಗ ನಿಯಂತ್ರಣ, ರಸಗೊಬ್ಬರ ಪೂರೈಸಲು ಸೂಚನೆ

ಗದಗ, ಜು 12: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೆಸರು ಬೆಳೆಗೆ ತಗಲುತ್ತಿರುವ ನಂಜಾಣು (ಹಳದಿ ರೋಗ) ನಿಯಂತ್ರಣಕ್ಕಾಗಿ ಮಾರ್ಗೋಪಾಯಗಳ ಕುರಿತು ರೈತ ಬಾಂಧವರಲ್ಲಿ ತಿಳುವಳಿಕೆ ನೀಡಬೇಕು. ರೈತರ ಬಿತ್ತನೆ ಬೆಳೆಗೆ ಅಗತ್ಯಕ್ಕನುಗುಣವಾಗಿ ಸಮರ್ಪಕ ರಸಗೊಬ್ಬರ ಪೂರೈಕೆ ಕಾರ್ಯವಾಗುವಂತೆ ಕೃಷಿ ಇಲಾಖಾ ಅಧಿಕಾರಿಗಳು ನಿರಂತರ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ತಾಲೂಕು ಮಟ್ಟದ ಅಧಿಕಾರಿಗಳು ರೈತರ ಕೃಷಿ ಬೆಳೆ ಹಾನಿಯಾದ ಬಗ್ಗೆ ವರದಿ ನೀಡಬೇಕು. ನಿರಂತರವಾಗಿ ಕ್ಷೇತ್ರ ಭೇಟಿ ನೀಡುವ ಮೂಲಕ ರೈತರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವ ಕಾರ್ಯ ಮಾಡಬೇಕು ಎಂದರು.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಸ್ವತಹ ತಾವೇ ಮೊಬೈಲ್ ಆಪ್ ಮೂಲಕ ಸಮೀಕ್ಷೆ ಮಾಡಬೇಕಿದೆ. ಈ ಕುರಿತು ರೈತರ ಸಮುದಾಯವನ್ನು ಹೆಚ್ಚು ಜಾಗೃತರನ್ನಾಗಿಸಲು ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೇ ನೀಡಿದರು. ಜಿಲ್ಲೆಯ ರೈತ ಸಂಪರ್ಕ ಕೇಂದ್ರ ಹಾಗೂ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಕಳಪೆ ಬಿತ್ತನೆ ಬೀಜ, ಗೊಬ್ಬರ ಮಾರಾಟವಾಗದಂತೆ ನಿಗಾವಹಿಸಬೇಕು. ನಿಯಮಾನುಸಾರ ಬೀಜ ಗೊಬ್ಬರ ಮಾರಾಟವಾಗುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ ಮಾತನಾಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.74ರಷ್ಟು ಅಧಿಕ ಮಳೆಯಾಗಿದೆ. 3,26,618 ಹೆ. ಬಿತ್ತನೆ ಗುರಿ ಇದ್ದು ಶೇ. 83%ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈ ವಾರವು ನಿರಂತರ ಮಳೆಯಾಗುತ್ತಿರುವದರಿಂದ ಈರುಳ್ಳಿ ಮತ್ತು ಮೆಣಸಿನಕಾಯಿ ಬಿತ್ತನೆ ಕಾರ್ಯ ನಡೆಯುತ್ತಿದೆ ಎಂದರು. ಹೆಸರು ಬೆಳೆಗೆ ನಂಜಾಣು ರೋಗ(ಹಳದಿ ರೋಗ) ಕಂಡು ಬಂದಿದ್ದು ಆರಂಭದಲ್ಲಿಯೇ ಈ ರೋಗ ಲಕ್ಷಣಗಳಿರುವ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ರೋಗದ ತೀವ್ರತೆ ಹೆಚ್ಚಾದಲ್ಲಿ ಅಂತರವ್ಯಾಪಿ ಕೀಟನಾಶಕಗಳ ಸಿಂಪಡಣೆ ಮಾಡಬೇಕು ಈ ಕುರಿತು ರೈತರಲ್ಲಿ ಅರಿವು ಮೂಡಿಸಲು ಇಲಾಖಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಸಭೆಯಲ್ಲಿ ತಾಲೂಕು ಕೃಷಿ ಅಧಿಕಾರಿಗಳು, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.