ನಂಜನಗೂಡು ರಾಯರ ಮಠದಲ್ಲಿ ಮಧ್ವ ನವಮಿ ಆಚರಣೆ

ವಿಜಯಪುರ,ಫೆ.19:ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಧ್ವ ನವಮಿಯನ್ನು ಭಾನುವಾರ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಬೆಳಿಗ್ಗೆ ಸುಮಧ್ವವಿಜಯ ಪಾರಾಯಣ, ವಾಯುಸ್ತುತಿ ಪುನಶ್ಚರಣೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಜರುಗಿದವು.
ನಂತರ ಶ್ರೀಮದಾಚಾರ್ಯರ ಸರ್ವಮೂಲ ಗ್ರಂಥಗಳು ಹಾಗೂ ಆನಂದತೀರ್ಥರ ಭಾವಚಿತ್ರವನ್ನು ರಜತ ಪೀಠದಲ್ಲಿ ಇಟ್ಟು ರಥೋತ್ಸವ ಅತ್ಯಂತ ವೈಭವದಿಂದ ಜರುಗಿತು.
ರಥೋತ್ಸವದ ಕಾಲಕ್ಕೆ ಸಂಗೀತ ಸೇವೆಯನ್ನು ಭಾವುಕ ಭಕ್ತರ ತಂಡ ಭಕ್ತಿ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಮಹಿಳಾ ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಗೀತ ಸೇವೆ ಸಲ್ಲಿಸಿದರು.
ಆಚಾರ್ಯ ಮಧ್ವರನ್ನು ಕುರಿತು ಉಪನ್ಯಾಸ ನೀಡಿದ ಪಂಡಿತ ಡಾ. ಕೃಷ್ಟಾಚಾರ್ಯ ಕಾಖಂಡಕಿ, ಆಚಾರ್ಯ ಮಧ್ವರ ಸಂದೇಶಗಳು ಸರ್ವಕಾಲಿಕ ಮಾರ್ಗದರ್ಶಕವಾಗಿವೆ. ಅವರ ಸಕಲ ಗ್ರಂಥಗಳಲ್ಲಿ ಮಾನವೀಯ ಗುಣಗಳ ಉಲ್ಲೇಖವಿದೆ. ಮಧ್ವ ಮತದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಅಗ್ರಗಣ್ಯರಲ್ಲಿ ಮಧ್ವಾಚಾರ್ಯರ ಹೆಸರು ಕಿರೀಟ ಪ್ರಾಯ ಎಂದು ನುಡಿದರು.
ಶ್ರೀ ಮಠದ ಅರ್ಚಕÀ ರವಿ ಆಚಾರ್ಯ, ಶ್ರೀಧರಾಚಾರ್ಯರು ವೃಂದಾವನ ಸೇರಿದಂತೆ ರಥವನ್ನು ಪುಷ್ಪಗಳಿಂದ ಅಲಂಕರಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮಠದ ವಿಚಾರಣಕರ್ತ ಗೋಪಾಲ ನಾಯಕ, ಬಂಡಾಚಾರ್ಯ ಜೋಶಿ(ಕೂಡಗಿ), ವಿಜಯೀಂದ್ರ ಜೋಶಿ, ಕೃಷ್ಣ ಬೀಡಕರ, ಶ್ರೀಧರ ಹರಿದಾಸ, ಪ್ರಕಾಶ ಬಿಜಾಪುರ, ಭೀಮಣ್ಣ ಕುಲಕರ್ಣಿ, ಗುರುರಾಜ ಸೊಂಡೂರ, ಡಿ.ಆರ್. ನಾಡಿಗ, ಜಯತೀರ್ಥ ಕಿರಸೂರ, ಕೃಷ್ಣ ದೇಶಪಾಂಡೆ, ಶ್ರೀಕೃಷ್ಣ ಪಡಗಾನೂರ, ಅರುಣ ತೊರವಿ, ಅಶೋಕ ತಾವರಗೇರಿ, ಮಧುಕರ ಹೆರಕಲ್ ಮುಂತಾದವರು ಭಾಗವಹಿಸಿದ್ದರು.