ನಂಜನಗೂಡು ಮಠದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಸಾಮೂಹಿಕ ಗಾಯತ್ರಿ ಜಪ

ವಿಜಯಪುರ:ನ.8: ಕಳೆದ 18 ವರ್ಷಗಳಿಂದ ಐತಿಹಾಸಿಕ ನಗರದಲ್ಲಿ ಸರ್ವ ಜನಾಂಗಕ್ಕೂ ಪರಮಪವಿತ್ರವಾದ ಗಾಯತ್ರಿ ಮಂತ್ರದ ಬಗ್ಗೆ ಜನರಲ್ಲಿ ಜಾಗೃತೆ ಉಂಟು ಮಾಡುವ ಸದುದ್ದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿಯ ಗಾಯತ್ರಿ ಸಮೂಹ ತನ್ನ ನವೆಂಬರ ತಿಂಗಳ ಮೊದಲನೇ ರವಿವಾರದ ಸಾಮೂಹಿಕ ಗಾಯತ್ರಿ ಜಪವನ್ನು ಇಂದು ಬೆಳಿಗ್ಗೆ ನಗರದ ಬಾಗಲಕೋಟ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜನೆ ಮಾಡಿತ್ತು.

ಬೆಳಿಗ್ಗೆ ಸರಿಯಾಗಿ 6.45 ಕ್ಕೆ ಪ್ರಾರಂಭಗೊಂಡ ಸಾಮೂಹಿಕ ಗಾಯತ್ರಿ ಜಪ ಸರಿಯಾಗಿ 8.30 ಕ್ಕೆ ಸಂಪನ್ನವಾಯಿತು. ವಿಶ್ವಗುರುಗಳಾದ ಶ್ರೀ ರಾಘ ವೇಂದ್ರ ಯತಿಗಳ ವೃಂದಾವನದ ದಿವ್ಯ ಸ್ಥಾನದಲ್ಲಿ ಜಪ ಮಾಡುವದು ಒಂದು ಸೌಭಾಗ್ಯವಾಗಿದ್ದರಿಂದ ಜಪದಲ್ಲಿ ಕುಟುಂಬ ಸಮೇತ ಎಲ್ಲರೂ ಭಾಗವಹಿಸಿ ಮಾತಾ ಗಾಯತ್ರಿಯ ಹಾಗೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿದ್ದು ವಿಶೇಷತೆಯಾಗಿತ್ತು.

ಸಮೂಹದ ಪ್ರಮುಖರಲ್ಲೊಬ್ಬರಾಗಿರುವ ರಾಜು ಪದಕಿ ಮಾತನಾಡಿ ” ಗಾಯತ್ರಿ ಸಮೂಹದಲ್ಲಿ ಯಾವುದೇ ಬ್ಯಾಂಕ್ ಖಾತೆ ಇಲ್ಲ, ನಮ್ಮಲ್ಲಿರುವದು ಕೇವಲ ಜಪದ ಖಾತೆ ಮಾತ್ರ. ಕಳೆದ 18 ವರ್ಷಗಳಿಂದ ಯಾವುದೇ ಕಾರಣಕ್ಕೂ ನಮ್ಮ ಜಪ ನಿಂತಿಲ್ಲ. ಮಳೆ ಇರಲಿ,ಬಿಸಿಲು ಇರಲಿ, ಚಳಿ ಇರಲಿ, ಪ್ರತಿ ತಿಂಗಳ ಮೊದಲ ರವಿವಾರದಂದು ಗಾಯತ್ರಿ ಜಪ ಕಾರ್ಯಕ್ರಮ ತಪ್ಪದೇ ನಡೆದು ಬಂದಿದೆ. ಅಷ್ಟೇ ಅಲ್ಲ ಕೊವಿಡ್ ಸಮಯದಲ್ಲೂ ಸಹ ಒಂದಿಬ್ಬರು ಮನೆಯಲ್ಲಿ ಕುಳಿತು ಗಾಯತ್ರಿ ಜಪ ಮಾಡಿದರೆ ಅವರೊಂದಿಗೆ ಉಳಿದವರು ಆನ್ ಲೈನ್ ಮೂಲಕ ಸೇರಿಕೊಂಡಿದ್ದರು” ಎಂದರು,

ತಡಸದ ಗಾಯತ್ರಿ ತಪೋಭೂಮಿ ಟ್ರಸ್ಟನ ಕಾರ್ಯದರ್ಶಿಯೂ ಆಗಿರುವ ಪದಕಿಯವರು, ” ಮುಂದಿನ ವರ್ಷ ಅಂದರೆ2023ರ ಫೆಬ್ರುವರಿಯಲ್ಲಿ ತಡಸದ ಗಾಯತ್ರಿ ತಪೋಭೂಮಿಯಲ್ಲಿ ಶ್ರೀ ವಲ್ಲಭ ಚೈತನ್ಯ ಗುರುಗಳ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ ಅದೇ ಸಮಯದಲ್ಲಿ ಗೋಶಾಲೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

“2025 ರಲ್ಲಿ ತಡಸನಲ್ಲಿ ಗಾಯತ್ರಿ ಪ್ರತಿಷ್ಠಾನದ ಬೆಳ್ಳಿ ಹಬ್ಬ ಸಮಾರಂಭವನ್ನು ಮೂರು ದಿನಗಳ ಆಯೋಜನೆ ಮಾಡಲಾಗಿದ್ದು, ಆ ಸಮಯದಲ್ಲಿ ಮೂರು ದಿನಗಳಲ್ಲಿ ಒಂದು ದಿನ ಶಂಕರಭಗವತ್ಪಾದರ ಮಠಗಳ ಎಲ್ಲ ಯತಿಗಳನ್ನು, ಎರಡನೇ ದಿನದಂದು ಮಾಧ್ವಯತಿಗಳೆಲ್ಲರನ್ನು ಮತ್ತು ಮೂರನೇ ದಿನ ಕಣ್ವಮಠದ ಎಲ್ಲ ಸ್ವಾಮಿಗಳನ್ನು ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಕೈಹಾಕಲಾಗಿದೆ” ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಶ್ರೀಕ್ಷೇತ್ರ ಮಂತ್ರಾಲಯಕ್ಕೆ ತೆರಳಿ ಅಲ್ಲಿ ಗುರುಗಳ ಸಮ್ಮುಖದಲ್ಲಿ ಸಮೂಹಿಕ ಗಾಯತ್ರಿ ಜಪವನ್ನು ಮಾಡುವ ಸಂಕಲ್ಪ ಮಾಡ ಲಾಗಿದೆ ಎಂದರು. ಅದಕ್ಕಾಗಿ ಗಾಯತ್ರಿ ಉಪಾಸಕರೆಲ್ಲರೂ ಪ್ರತಿ ತಿಂಗಳ ಮೊದಲ ರವಿವಾರದಂದು ಜಪದಲ್ಲಿ ಉಪಸ್ಥಿತರಿರುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ನಂಜನಗೂಡು ಮಠದ ವಿಚಾರಣಾಕರ್ತ ಹಾಗೂ ಹಿರಿಯ ಪತ್ರಕರ್ತ ಗೋಪಾಲ ನಾಯಕರನ್ನು ಬಸವ ಭೂಷಣ ಪ್ರಶಸ್ತಿ ದೊರೆತಿರುವದಕ್ಕೆ ಹಾಗೂ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮುಕುಂದ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಮಠದ ಅರ್ಚಕ ಶ್ರೀಧರಾಚಾರ್ಯರು ಗಾಯತ್ರಿ ಜಪದ ಮಹತ್ವ ಹಾಗೂ ಅದನ್ನು ಪಠಿಸುವದರಿಂದ ದೊರೆಯವ ಭಾಗ್ಯಗಳ ಕುರಿತು ವಿವರಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ವೇಣುಗೋಪಾಲ ಕಟ್ಟಿ ಮಾತನಾಡಿದರು. ಕುಲಕರ್ಣಿ ತಡಸಗೆ ಹೋಗುವ ಬನ್ನಿ ಎಂಬ ಗೀತೆ ಹಾಡಿದರು.

ಶ್ರೀಮಠದ ಶಾಖಾ ವ್ಯವಸ್ಥಾಪಕ ರವಿ ಆಚಾರ್ಯರು ಸಕಲ ಸಿಬ್ಬಂಧಿಯೊಂದಿಗೆ ಸೇರಿಕೊಂಡು ಸಾಮೂಹಿಕ ಗಾಯತ್ರಿ ಜಪಕ್ಕೆ ಎಲ್ಲ ಅನುಕೂಲತೆಗಳನ್ನು ಮಾಡಿದ್ದರು.