ನಂಜನಗೂಡು ಮಠದಲ್ಲಿ ಗುರುಸಾರ್ವಭೌಮರ 425ನೇ ವರ್ಧಂತಿ ಉತ್ಸವ

ವಿಜಯಪುರ, ಮಾ.21-ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಶ್ರೀ ರಾಘವೇಂದ್ರ ಸ್ವಾಮಿಗಳವರ 426ನೇ ವರ್ಧಂತಿ ಉತ್ಸವವನ್ನು ಅತ್ಯಂತ ಭಕ್ತಿ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.
ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ, ಬಳಿಕ ಪಂಚಾಮೃತ ಅಭಿಷೇಕ, ಭಕ್ತ ಮಂಡಳಿಯಿಂದ ಅಷ್ಟೋತ್ತರ ಪಾರಾಯಣ ನಡೆದವು. ಇದೇ ಸಂದರ್ಭದಲ್ಲಿ ವೃಂದಾವನಕ್ಕೆ ನೂತನ ವಸ್ತ್ರ ಸಮರ್ಪಿಸಲಾಯಿತು.
ಸುಮಾರು ಒಂದು ಗಂಟೆ ಕಾಲ ಶ್ರೀ ಕೃಷ್ಣ-ವಾದಿರಾಜ ಭಜನಾ ಮಂಡಳಿ ಸದಸ್ಯೆಯರು ನಡೆಸಿಕೊಟ್ಟ ಸುಶ್ರಾವ್ಯ ಸಂಗೀತ ಸೇವೆ ಭಕ್ತರ ಮನ ತಣಿಸುವಲ್ಲಿ ಯಶಸ್ವಿಯಾಯಿತು.
ನಂತರ ರಥೋತ್ಸವ ಬಳಿಕ ಕನಕಸೇವೆ ನಡೆದವು. ಅಲಂಕೃತ ರಥದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಪ್ರತಿಮೆ ಕಂಗೊಳಿಸುತ್ತಿತ್ತು. ಶ್ರೀಮಠವನ್ನು ತಳಿರು ತೋರಣ ಬಾಳೆ ದಿಂಡುಗಳಿಂದ ಅಲಂಕರಿಸಲಾಗಿತ್ತು.
ಅರ್ಚಕರಾದ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯ ಯತಿರಾಯರ ವೃಂದಾವನಕ್ಕೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದು ಭಕ್ತರ ಗಮನ ಸೆಳೆಯಿತು. ದೇವರ ಹಿಪ್ಪರಗಿಯ ಭಕ್ತವೃಂದದ ವಿಶೇಷ ಸೇವೆಯು ಭಕ್ತಜನರ ಪ್ರೀತಿಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ ಸೇರಿದಂತೆ ಗುರುರಾಜ ಕುಲಕರ್ಣಿ (ದೇವರಹಿಪ್ಪರಗಿ), ವಿ.ಬಿ ಕುಲಕರ್ಣಿ, ಜಿ.ಎಸ್ ಕುಲಕರ್ಣಿ, ವಾಮನರಾವ ದೇಶಪಾಂಡೆ, ಪವಮಾನ ಜೋಶಿ (ಮುತ್ತಗಿ), ಪ್ರಕಾಶ ಬಿಜಾಪುರ, ಸೊಂಡೂರ, ರಾಘಣ್ಣ ಜೋಶಿ, ಭೀಮಣ್ಣ ಕುಲಕರ್ಣಿ, ಗುರುರಾಜ ನರಗುಂದಕರ, ಮುಂತಾದವರು ಉಪಸ್ಥಿತರಿದ್ದರು