ಧ್ವಜ ಮಾರಾಟದಿಂದ ರೂ 23 ಲಕ್ಷ ಪೊಲೀಸರಕಲ್ಯಾಣ ನಿಧಿಗೆ ಬಳಕೆ-ಎಸ್‌ಪಿ ಎಂ.ನಾರಾಯಣ

ಕೋಲಾರ,ಏ,೩-ಪೊಲೀಸರು ಧ್ವಜ ಮಾರಿ ಸಂಗ್ರಹಿಸಿದ ಒಟ್ಟು ೨೩ ಲಕ್ಷ ರೂ.ಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ, ಈ ಹಣವನ್ನು ಪೊಲೀಸರ ಕಲ್ಯಾಣ ನಿಧಿಗೆ ಬಳಸಿಕೊಳ್ಳಲಾಗುವುದು ಮತ್ತು ಮರಣೋತ್ತರ ನಿಧಿಗೆ ಮತ್ತು ಆರೋಗ್ಯ ವೆಚ್ಚವನ್ನು ಸಹ ಇದರಲ್ಲಿ ಬಳಸಿಕೊಳ್ಳಲಾಗುವುದೆಂದು ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ ತಿಳಿಸಿದರು.
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಏರ್ಪಡಿಸಿದ್ದ ಧ್ವಜ ದಿನಾಚರಣೆ ಕಾರ್ಯಕ್ರದಲ್ಲಿ ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಸೊಣಪ್ಪರನ್ನು ಅಭಿನಂದಿಸಿ ಅವರು ಮಾತನಾಡಿ
ನಿವೃತ್ತ ಪೊಲೀಸರ ಕಲ್ಯಾಣ ನಿಧಿಯಲ್ಲಿ ೧೮ ಲಕ್ಷ ರೂ.ಗಳನ್ನು ಠೇವಣಿ ಇಡಲಾಗಿದೆ. ಇದರಲ್ಲಿ ೨.೯೦ ಲಕ್ಷ ರೂ.ಗಳನ್ನು ಆರೋಗ್ಯ ವೆಚ್ಚಕ್ಕಾಗಿ ಮತ್ತು ಮರಣ ಹೊಂದಿದ ಇಲಾಖೆಯ ಸಿಬ್ಬಂದಿಗೆ ಬಳಸಿಕೊಳ್ಳಲಾಗಿದೆ ಎಂದರು.
೨೦೨೩ರಲ್ಲಿ ೧೧ ಲಕ್ಷ ೨೫ ಸಾವಿರ ರೂ.ಗಳನ್ನು ಧ್ವಜ ಮಾರಾಟದಿಂದ ಸಂಗ್ರಹಿಸಲಾಗಿದೆ, ಇದನ್ನು ಸಹ ಕಲ್ಯಾಣ ನಿಧಿಗೆ ಬಳಸಿಕೊಳ್ಳಲಾಗುವುದು, ಮರಣ ಹೊಂದಿದ ಪೊಲೀಸರಿಗೆ ಶವಸಂಸ್ಕಾರಕ್ಕೆ ೧೦ ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಸಮುದಾಯ ಭವನ ಆರಂಭಿಸಲಾಗಿದೆ. ಇದರಲ್ಲಿ ಬಂದ ಹಣವನ್ನು ಪೊಲೀಸರ ಕಲ್ಯಾಣ ನಿಧಿಗೆ ಬಳಸಿಕೊಳ್ಳಲಾಗುವುದು, ಚಾಲ್ತಿಯಲ್ಲಿರುವ ಪೊಲೀಸ್ ಕ್ಯಾಂಟೀನ್‌ನನ್ನು ಬಿಎಸ್‌ಎಫ್‌ಗೆ ವಹಿಸಲಾಗುವುದು, ಶೇ.೫೦ರ ರಿಯಾಯಿತಿ ಧರದಲ್ಲಿ ಪೊಲೀಸ್ ಔಷಧಾಲಯದಲ್ಲಿ ಔಷಧಿಗಳನ್ನು ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಟಮಕಾದಲ್ಲಿರುವ ವಾಣಿಜ್ಯ ವಿದ್ಯಾಶಾಲೆ ಮತ್ತು ಜಿಮ್‌ನನ್ನು ಡಿಆರ್‌ಗೆ ಸ್ಥಳಾಂತರಿಸಲಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಸಲ್ಲಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಪೊಲೀಸ್ ಸಿಬ್ಬಂದಿ ದಾಕ್ಷಾಯಿಣಿ, ಸುರೇಶ್ ಮತ್ತೊಬ್ಬ ಸುರೇಶ್‌ರನ್ನು ಅಭಿನಂದಿಸಿದ ಎಸ್‌ಪಿ ನಾರಾಯಣ, ಈ ಬಾರಿಯ ಚುನಾವಣೆಯನ್ನು ಸುಸೂತ್ರವಾಗಿ ನಿರ್ವಹಿಸುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು.
ನಿವೃತ್ತ ಹೆಚ್ಚುವರಿ ವರಿಷ್ಠಾಧಿಕಾರಿ ಬಿ.ಎಂ.ನಾರಾಯಣಸ್ವಾಮಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಗುಮಾಸ್ತೆಯಾಗಿ ಸೇರಿ ಕೋಲಾರದಲ್ಲೇ ಎಎಸ್ ಪಿ ಆಗಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದು ಸಂತಸ ತಂದಿದೆ, ಇಲಾಖೆಯ ಕಿರಿಯ ಸಿಬ್ಬಂದಿಯಿಂದ ಹಿರಿಯ ಅಧಿಕಾರಿಗಳವರೆಗೆ ಅವರದ್ದೇ ಹಂತದ ಜವಾಬ್ದಾರಿ ಇರುತ್ತದೆ, ಒತ್ತಡದ ನಡುವೆಯೂ ನಿವೃತ್ತಿಯವರೆಗೂ ಉತ್ಸಾಹದಿಂದ ಕೆಲಸ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸುವ ತೃಪ್ತಿ ಹೊಂದಿರಬೇಕು ಎಂದರು.
ಜಿ.ಪಂ ಸಿಇಒ ಯುಕೇಶ್ ಕುಮಾರ್ ಮಾತನಾಡಿ, ನಮ್ಮ ತಂದೆ ಸಹ ನಿವೃತ್ತ ಸೈನ್ಯಾಧಿಕಾರಿಯಾಗಿದ್ದರು, ಹಾಗಾಗಿ ಪೊಲೀಸರ ಬಗ್ಗೆ ನನಗೆ ಅಭಿಮಾನ ಇದೆ, ಶಿಸ್ತಿಗೆ ಮತ್ತೊಂದು ಹೆಸರು ಪೊಲೀಸ್, ಯಾವುದೇ ಸಂದರ್ಭದಲ್ಲಿ ಸೇವೆಗೆ ಕರೆ ಬರುತ್ತದೆ ಆ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಬೇಕಾಗುತ್ತದೆ ಹಾಗೆಯೇ ಸವಾಲಿನ ಜವಾಬ್ದಾರಿ ಆಗಿರುತ್ತದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಘಟನೆ ನಡೆಯುವ ಮೊದಲೇ ಮುನ್ನೆಚ್ಚರಿಕೆ ಕೈಗೊಳ್ಳುವ ಮೂಲಕ ಯಾವುದೇ ಅಹಿತಕರ ಘಟನೆ ಆಗದಂತೆ ಉತ್ತಮ ಸೇವೆ. ಜಲಜೀವನ ಮಿಷನ್ನಿಂದ ಎಲ್ಲ ಠಾಣೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಭರವಸೆ ನೀಡಿದರು, ಸದಾ ಸೇವೆಯ ನಡುವೆಯೂ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ರಕ್ಷಣೆಗೂ ಆದ್ಯತೆ ಕೊಡಿ ಎಂದು ನುಡಿದರು.