ಧ್ರುವನಾರಾಯಣ ನಿಧನಕ್ಕೆ ಖೂಬಾ ಸಂತಾಪ

ಬೀದರ:ಮಾ.12:ಮಾಜಿ ಸಂಸದರು, ಶಾಸಕರು ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ಶ್ರೀ ಆರ್. ಧ್ರುವನಾರಾಯಣರವರ ನಿಧನಕ್ಕೆ ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಹಾಗೂ ನೂತನ ಹಾಗೂ ನವಿಕರಿಸಬಹುದಾದ ಇಂಧನ ಮೂಲ ಖಾತೆ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾರವರು ಇದೊಂದು ಅಘಾತಕಾರಿ ಸುದ್ದಿಯಾಗಿದೆ ಹಾಗೂ ಒಬ್ಬ ಒಳ್ಳೆಯ ಸ್ನೇಹಿತ ನಮ್ಮಿಂದ ಇಂದು ದೂರವಾಗಿದ್ದಾರೆ ಎಂದು ತಿಳಿಸಿ ಕಂಬನಿ ಮಿಡಿದಿದ್ದಾರೆ.

ಆರ್. ಧ್ರುವನಾರಾಯಣರವರು 2014 ರಿಂದ 2019ರವರೆಗೆ ಸಂಸದರಾಗಿದ್ದ ವೇಳೆಯೂ ಸಂಸತ್ತಿನಲ್ಲಿ ಹಲವಾರು ಸಾಮಾಜಿಕ ಚರ್ಚೆಗಳಲ್ಲಿ ಭಾಗವಹಿಸಿದ್ದರು, ಅವರಿಗಿದ್ದ ಸಾಮಾಜಿಕ ಕಳಕಳಿ, ಅವರ ಅನುಭವದ ಸಲಹೆಗಳು ನಮಗೆಲ್ಲಾ ಎಷ್ಟೋ ಸಲ ನಮ್ಮ ಸಾಮಾಜಿಕ ಕಾರ್ಯಕ್ರಮಗಳಿಗೆ ದಾರಿ ಮಾಡಿಕೊಟ್ಟಿವೆ. ನಮ್ಮ ಎಲ್ಲಾ ಸಂಸದರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು, ಅಜಾತಶತ್ರು ಎಂದು ಹೇಳಿದರೂ ತಪ್ಪಾಗಲಾರದು, ಸಮಾಜಕ್ಕೆ ಒಳಿತಾಗುವ ಹಲವಾರು ವಿಷಯಗಳ ಕುರಿತು ಎಲ್ಲರೊಂದಿಗೆ ಮುಕ್ತವಾಗಿ ಚರ್ಚಿಸಿ, ತನ್ನದೆ ಆದ ಸಲಹೆಗಳು ಸಹ ಸಂಸತ್ತಿನಲ್ಲಿ ಮಂಡಿಸುತ್ತಿದ್ದರು, ಇವರೊಬ್ಬ ಉತ್ತಮ ಸಂಸದೀಯ ಪಟು ಎಂದು ತಿಳಿಸಲು ಸಂತೋಷವಾಗುತ್ತದೆ ಎಂದು ತಿಳಿಸಿ ಅವರೊಂದಿಗೆ ಇದ್ದ ಉತ್ತಮ ಒಡನಾಟವನ್ನು ಕೇಂದ್ರ ಸಚಿವರು ತಿಳಿಸಿದ್ದಾರೆ.

ಆದರೆ ಇಂದು ಇಂತಹ ಒಬ್ಬ ಉತ್ತಮ ಸ್ನೇಹಿತರನ್ನು ಕಳೆದುಕೊಂಡು, ನಾವೆಲ್ಲಾ ಬಡವಾಗಿದ್ದೇವೆ, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವರು ತನ್ನ ದುಃಖವನ್ನು ವ್ಯಕ್ತಪಡಿಸಿದ್ದಾರೆ. ದೇವರು ದಿವಂಗತರ ಆತ್ಮಕ್ಕೆ ಶಾಂತಿಯನ್ನು ನೀಡಿ, ಅವರ ಕುಟುಂಬ, ಬಂಧು ಬಳಗಕ್ಕೆ ಹಾಗೂ ಅವರ ಅಭಿಮಾನಿ ಬಳಗಕ್ಕೆ ಈ ದುಃಖವನ್ನು ತಡೆಯುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.