
ದಾವಣಗೆರೆ.ಮಾ.೧೧- ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆಯ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ್ ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ. ಧ್ರವನಾರಾಯಣ ಅವರು ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ಧತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದರು.ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ.ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ನೋವಿನಿಂದ ಪ್ರತಿಕ್ರಿಯಿಸಿದ್ದಾರೆ. ಅವರಿಗೆ ೬೧ ವರ್ಷ ಅಷ್ಟೇ ಆಗಿತ್ತು ಅವರ ಸಾವು ನನಗೆ ಅಷ್ಟೇ ಅಲ್ಲ, ಕಾರ್ಯಕರ್ತರಿಗೆ, ನಾಯಕರಿಗೆ ತುಂಬಲಾರದ ನಷ್ಟ. ಆದರೆವಿಧಿ ಆಟದ ಮುಂದೆ ನಾವ್ಯಾರು ಆಡೋಕೆ ಆಗಲ್ಲ. ಕಾಂಗ್ರೆಸ್ ನಲ್ಲಿ ಎನ್ ಎಸ್ ಯುಐ ನಿಂದ ವಿಧಾನಸಭಾ, ಸಂಸತ್ತಿಗೆ ಹೋದವರು ಕಾಂಗ್ರೆಸ್ ಗೆ ಬಹಳ ನಿಷ್ಟರಾಗಿ, ಬದ್ಧತೆ ಇದ್ದವರು. ೨ ಬಾರಿ ಶಾಸಕರು, ೨ ಬಾರಿ ಎಂಪಿಯಾಗಿದ್ದವರು ಜನಪರ ಕಾಳಜಿ ಇದ್ದ ವ್ಯಕ್ತಿ
ಎಂದು ಭಾವುಕರಾದರು.
ಈ ವೇಳೆ ಪ್ರಕಾಶ್ ರಾಥೋಡ್,ಸಲೀಂ ಅಹ್ಮದ್, ಹೆಚ್.ಬಿ ಮಂಜಪ್ಪ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಹೊನ್ನಾಳಿ, ಹರಿಹರ ಪ್ರಜಾಧ್ವನಿ ರದ್ದು:
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ಹರಿಹರದಲ್ಲಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಯಾತ್ರೆ ದಾವಣಗೆರೆಯಲ್ಲಿತ್ತು. ನಿನ್ನೆ ಚನ್ನಗಿರಿ, ಬಸವಾಪಟ್ಟಣ, ಜಗಳೂರಿನಲ್ಲಿ ಪ್ರಜಾಧ್ವನಿ ಯಾತ್ರೆ ನಡೆದಿತ್ತು. ದಾವಣಗೆರೆ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ತಂಗಿದ್ದ ಸಿದ್ದರಾಮಯ್ಯ ಅವರು ಹೊನ್ನಾಳಿಗೆ ಹೊರಡಲು ಅಣಿಯಾಗುತ್ತಿದ್ದರು. ಆದರೆ, ಧ್ರುವನಾರಾಯಣ್ ಸಾವಿನಿಂದಾಗಿ ಅವರ ದಾವಣಗೆರೆ ಜಿಲ್ಲೆಯ ಕಾರ್ಯಕ್ರಮಗಳನ್ನು ರದ್ದು ಮಾಡಲಾಯಿತು. ಸ್ನೇಹಿತನ ಅಂತಿಮ ದರ್ಶನಕ್ಕೆ ಸಿದ್ದರಾಮಯ್ಯ ತೆರಳಿದರು.