
ಚಾಮರಾಜನಗರ, ಮಾ.14:- ಧ್ರುವತಾರೆಯಂತೆ ಪ್ರಜ್ವಲಿಸಿದ ಸರಳ ಸಜ್ಜನಿಕೆ ಸ್ನೇಹಜೀವಿ, ಅಭಿವೃದ್ದಿಯ ಹರಿಕಾರ ಆರ್. ಧ್ರುವನಾರಾಯಣ್ ಅವರ ಅಕಾಲಿಕ ನಿಧನ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಕಂಬನಿ ಮಿಡಿದರು.
ನಗರದ ಜಿಲ್ಲಾ ವಕೀಲರ ಸಂಘದಿಂದ ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರು ನಿಧನ ಗೌರವಾರ್ಥ ಜಿಲ್ಲೆಯ ವಕೀಲರು ಇಂದು ನ್ಯಾಯಾಲಯ ಎಲ್ಲಾ ಕಾರ್ಯಕಲಾಪದಿಂದ ದೂರ ಉಳಿದು, ಅಗಲಿದ ನಮ್ಮೆಲ್ಲರ ನೆಚ್ಚಿನ ನಾಯಕ ಧ್ರುವನಾರಾಯಣ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಬಳಿಕ ನಡದ ಶ್ರದ್ದಾಂಜಲಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಇಂದುಶೇಖರ್, ದ್ರುವನಾರಾಯಣ್ ಅವರನ್ನು ಬಹಳ ಹತ್ತಿರದ ಬಲ್ಲೆ, ಅವರು 2004ರಲ್ಲಿ ಒಂದು ಮತಗಳ ಅಂತರದಲ್ಲಿ ಗೆಲ್ಲುವ ಸಂದರ್ಭದಲ್ಲಿ ಅವರ ನಿಕಟವರ್ತಿಯಾಗಿ ಚುನಾವಣೆಯಲ್ಲಿ ದುಡಿದೆ. ಅವರ ಸರಳ ವ್ಯಕ್ತಿತ್ವ ಮತ್ತು ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಗುಣ ಇಷ್ಟವಾಗಿತ್ತು. ಅವರ ಶ್ರಮದಿಂದಾಗಿ ಎರಡು ಬಾರಿ ಸಂಸದರು ಹಾಗು ಶಾಸಕರಿಗೆ ರಾಜ್ಯ ಮತ್ತು ರಾಷ್ಟ್ರಕ್ಕೆ ಚಿರಪರಿಚಿತರಾಗಿದ್ದರು. ಅವರೊಂದಿಗೆ ಸ್ನೇಹ ಭಾವ ಇನ್ನು ಬರೀ ನೆನಪು ಮಾತ್ರ ಎಂದರು.
ವಿಷ್ಣುವರ್ಧನ್ ಅವರು ನಿಧನದÀ ವಿಷಯ ತಿಳಿದು ಬಹಳ ದುಃಖಿತನಾಗಿದ್ದೆ. ನಂತರ ಧ್ರುವನಾರಾಯಣ್ ಅವರ ಅಕಾಲಿಕ ಮರಣದ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ. ಇನ್ನು ಎಲ್ಲಿ ಇಂಧ ಸ್ನೇಹಮಯ ವ್ಯಕ್ತಿಯನ್ನು ಕಾಣುವುದು ಎಂಬ ಬೇಸರ ಉಂಟಾಯಿತು. ಧ್ರುವನಾರಾಯಣ್ ಅವರು ಸಹ ವಿಷ್ಣುವರ್ಧನ್ ಅಭಿಮಾನಿಯಾಗಿದ್ದರು. ಅವರಂತೆ ಬಹಳ ಒಳ್ಳೆಯ ಗುಣಗಳನ್ನು ತಮ್ಮಜೀವನದಲ್ಲಿ ಮೈಗೂಡಿಸಿಕೊಂಡಿದ್ದ ಮೇರು ವ್ಯಕ್ತಿ. ಇಂಥ ಅದರ್ಶ ಪುರುಷನನ್ನು ಕಳೆದುಕೊಂಡಿದೆ. ಮುಂದಿನ ಯುವ ವಕೀಲರಿಗೆ ಅವರು ಮಾರ್ಗದರ್ಶಕರಾಗಿದ್ದರು ಎಂದರು.
ಹಿರಿಯ ವಕೀಲ ಕೆ. ಬಾಲಸುಬ್ರಮಣ್ಯ ಮಾತನಾಡಿ, ಧ್ರುವನಾರಾಯಣ್ ಅವರಂತಹ ವ್ಯಕ್ತಿಯನ್ನು ಮುಂದೆ ಕಾಣಲು ಸಾಧ್ಯವಿಲ್ಲ. ಅವರು ವಕೀಲರ ಸಂಘದ ಕಟ್ಟಡ ಹಾಗು ನ್ಯಾಯಾಲಯದ ಕಟ್ಟಡಗಳ ನಿರ್ಮಾಣವಾಗಲು ಪ್ರಮುಖ ಕಾರಣಕರ್ತರು, ವಕೀಲರ ಬಗ್ಗೆ ಆಪಾರ ಗೌರವ ಇತ್ತು. ವಕೀಲರ ಸಂಘ ಕಟ್ಟಡ ನಿರ್ಮಾಣ, ಸುಸಜ್ಜಿತ ಗ್ರಂಥಾಲಯ ಸೇರಿದಂತೆ ಅವರ ಕೊಡುಗೆ ಅಪಾರ ಎಂದು ಗುಣಗಾನ ಮಾಡಿದರು.
ವಕೀಲರಾದ ಅರುಣಕುಮಾರ್ ಮಾತನಾಡಿ, ಸಾಮಾನ್ಯ ವ್ಯಕ್ತಿಯಾದ ನನ್ನನ್ನು ಗುರುತಿಸಿ, ಇಂದು ನಿಮ್ಮೆಲ್ಲರ ಮುಂದೆ ನಿಲ್ಲುವಂತೆ ಮಾಡಿದ್ದು ಧ್ರುವನಾರಾಯಣ್ ಸಾಹೇಬರು. ವಕೀಲರು ಎಂದರೆ ಅವರಿಗೆ ಬಹಳ ಅಚ್ಚುಮೆಚ್ಚು. ಹೀಗಾಗಿ ತಮ್ಮ ಮಗನನ್ನು ವಕೀಲ ಪದವಿಧರನ್ನಾಗಿ ಮಾಡಿ, ಹೈಕೋರ್ಟ್‍ನಲ್ಲಿ ಪ್ರಾಕ್ಟಿಸ್ಟ್ ಮಾಡಿಸುತ್ತಿದ್ದರು. ಅವರ ಅತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿಕೊಂಡಿರು.
ಚಾಮರಾಜನಗರ ಜಿಲ್ಲೆಯಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲು ನಗರ ಪ್ರಮುಖ ವೃತ್ತ ಹಾಗೂ ರಸ್ತೆಗೆ ಅವರ ಹೆಸರು ನಾಮಕರಣ ಮಾಡುವ ಜೊತೆಗೆ ಅವರು ಪುತ್ಥಳಿಯನ್ನು ನಿರ್ಮಿಸಬೇಕೆಂದು ಒತ್ತಾಯ ಮಾಡಿದರು. ವಕೀಲರ ಸಂಘದಿಂದ ಧ್ರುವನಾರಾಯಣ್ ಕುಟುಂಬಕ್ಕೆ ಪತ್ರವನ್ನು ಬರೆದು ಕುಟುಂಬಕ್ಕೆ ಸಾಂತ್ವನ ಹೇಳುವಂತೆ ನಿರ್ಣಯ ಮಾಡಲಾಯಿತು.
ಸಭೆಯಲ್ಲಿ, ಸಂಘದ ಉಪಾಧ್ಯಕ್ಷ ಹರವೆ ಮಂಜು, ಕಾರ್ಯದರ್ಶಿ ಎನ್.ಕೆ. ವಿರೂಪಾಕ್ಷಸ್ವಾಮಿ, ಜಂಟಿ ಕಾರ್ಯಧರ್ಶಿ ಮಲ್ಲು, ಹಿರಿಯ ವಕೀಲರಾದ ಪುಟ್ಟರಾಜು, ಕೆ.ಎನ್. ಶ್ರೀನಿವಾಸಮೂರ್ತಿ, ಎಂ.ಶಿವಲಿಂಗೇಗೌಡ, ಪ್ರಸನ್ನಕುಮಾರ್, ಡಿ.ಜಿ. ಪುಟ್ಟಸ್ವಾಮಿ, ವಿದ್ಯಾಲತಾ, ಪುಟ್ಟಸ್ವಾಮಿ, ವಕೀಲರ ಸಂಘದ ಗುಮಾಸ್ತ ರಾಮಸಮುದ್ರ ಪರಶಿವಯ್ಯ ಇನ್ನಿತರರು ಇದ್ದರು.