ಧ್ರುವತಾರೆ ಅಗಲಿಕೆಗೆ ಮೊಂಬತ್ತಿ ಮೆರವಣಿಗೆ: ಗೌರವಪೂರ್ಣ ಶ್ರದ್ಧಾಂಜಲಿ

ಹನೂರು: ಮಾ.13:- ಚಾಮರಾಜನಗರ ಲೋಕಸಭಾ ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್ ಧ್ರುವನಾರಾಯಣ್ ಅವರ ನಿಧನಕ್ಕೆ ಕಾಮಗೆರೆ ಗ್ರಾಮದಲ್ಲಿ ಮೌನಾಚರಣೆ ಸಲ್ಲಿಸಿ ಮೊಂಬತ್ತಿ ಮೆರವಣಿಗೆ ಮಾಡುವ ಮೂಲಕ ಅಗಲಿದ ಧ್ರುವತಾರೆಗೆ ಗೌರವಪೂರ್ಣ ಶ್ರದ್ಧಾಂಜಲಿ ನಮನ ಸಲ್ಲಿಸಲಾಯಿತು.
ಕಾಮಗೆರೆ ಗ್ರಾಮದ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗ್ರಾಮದ ಗೌಡರು ಯಜಮಾನರು ಸೇರಿದಂತೆ ಎಲ್ಲ ಯುವಕರು ಗ್ರಾಮಸ್ಥರು ಧ್ರುವನಾರಾಯಣ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಗ್ರಾಮದ ಮುಖ್ಯ ರಸ್ತೆಯಲ್ಲಿ ಎರಡು ಕಿಲೋ ಮೀಟರ್ ವರೆಗೆ ಮೌನವಾಗಿ ಮೊಂಬತ್ತಿ ಮೆರವಣಿಗೆ ಮಾಡಲಾಯಿತು.
ಇದೇವೇಳೆ ವಕೀಲರಾದ ನಾಗರಾಜು ಅವರು ಮಾತನಾಡಿ ರಾಷ್ಟ್ರದ ಉತ್ತಮ ಸಂಸದರಾಗಿ ರಾಜ್ಯದ ಉತ್ತಮ ಶಾಸಕರಾಗಿ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿದ ಸರಳ ಸಜ್ಜನಿಕೆಯ ರಾಜಕಾರಣಿ ಧ್ರುವನಾರಾಯಣ್ ಅವರು ನಮ್ಮನ್ನೆಲ್ಲ ಅಗಲಿರುವುದು ದುಃಖಕರ ಸಂಗತಿ.
ಧ್ರುವನಾರಾಯಣ್ ಅವರು ದಲಿತ ಸಮುದಾಯಕ್ಕೆ ಮಾತ್ರ ನಾಯಕರಾಗಿರಲಿಲ್ಲ ಎಲ್ಲಾ ಸಮುದಾಯಕ್ಕೂ ನಾಯಕರಾಗಿದ್ದರು. ಅವರು ಪ್ರತಿಯೊಂದು ಜನಾಂಗದವರನ್ನು ಪ್ರೀತಿಸುತ್ತಿದ್ದರು. ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿದ್ದರು ಅವರ ಸೇವೆಯನ್ನು ನಾವು ಇನ್ನಷ್ಟು ಪಡೆಯಬೇಕಾಗಿತ್ತು.
ಕ್ಷೇತ್ರದ ಜನರು ನಾವು ನಮ್ಮ ಕುಟುಂಬದಲ್ಲಿ ಒಬ್ಬರನ್ನು ನಾವು ಕಳೆದುಕೊಂಡಿದ್ದೇವೆ ಎಂಬ ನೋವು ನಮ್ಮನ್ನು ಕಾಡುತ್ತಿದೆ ಅವರ ಸೇವೆಯನ್ನು ನಾವು ಮತ್ತಷ್ಟು ಪಡೆಯಬೇಕಾಗಿತ್ತು ಆದರೆ ಅದು ಆಗಲಿಲ್ಲ ನಾವು ತಬ್ಬಲಿಗಳಾಗಿ ಬಿಟ್ಟೆವು ಎಂಬ ಭಾವನೆ ನಮ್ಮನ್ನು ಕಾಡುತ್ತಿದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಗೌಡರು ಕುಮಾರ್, ಗೌಡರು ಮರಿಸ್ವಾಮಿ, ರವಿಗೌಡ, ಸುದ್ರಪ್ಪ, ಯಜಮಾನರು ನಾಯಗನ್ ಸಿದ್ದರಾಜು, ನಾಗರಾಜು, ಮಾದೇಶ್, ರಾಜಪ್ಪ, ಶ್ರೀನಿವಾಸ್, ವಿಲ್ಸನ್, ಪ್ರಸಾದ್, ಪತ್ರಕರ್ತ ಪ್ರಕಾಶ್ ಸೇರಿದಂತೆ ಗ್ರಾಮದ ಮುಖಂಡರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.