
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.29: ಧ್ಯಾನ್ ಚಂದ್ ಅವರ ಕ್ರೀಡೆಯ ಮೇಲಿನ ಪ್ರೀತಿ, ದೇಶಭಕ್ತಿ ಮತ್ತು ಅವರ ಸಾಧನೆ ನಮ್ಮ ನಿಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ವಿಜಯನಗರ ಶ್ರೀಕೃಷ್ಣದೇವರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸಾಹೇಬ ಅಲಿ ಹೆಚ್. ನಿರ ಗುಡಿ ಅವರು ಅಭಿಪ್ರಾಯಪಟ್ಟರು.
ಅವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ನಿಮಿತ್ತ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದಲ್ಲಿ ಮಂಗಳವಾರದಂದು ಜರುಗಿದ ಶಾಲಾಂತರ್ಗತ ಗುಡ್ಡಗಾಡು ಓಟ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಂತಹ ದಿಗ್ಗಜ ಆಟಗಾರನಿಗೆ ಗೌರವ ಸಲ್ಲಿಸಲು ಭಾರತ ಸರ್ಕಾರವು 2012 ರಲ್ಲಿ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಇಂದಿಗೂ ಮುಂದುವರಿಸಿಕೊಂಡು ಬಂದಿದೆ ಎಂದರು.
ಮೇಜರ್ ಧ್ಯಾನ್ ಚಂದ್ ಅವರು 1926 ರಿಂದ 1948 ರವರೆಗಿನ ತಮ್ಮ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ್ದಾರೆ ಮತ್ತು ಅವರ ಸಂಪೂರ್ಣ ವೃತ್ತಿಜೀವನದಲ್ಲಿ ಸುಮಾರು 1,000 ಗೋಲುಗಳನ್ನು ಗಳಿಸಿದ್ದಾರೆ.
1928, 1932,1936 ರ ಮೂರು ಒಲಂಪಿಕ್ಸ್ ಗಳಲ್ಲಿ ಭಾರತ ದೇಶವು ಹಾಕಿಯಲ್ಲಿ ವಿಶೇಷ ಸ್ಥಾನ ದಾಖಲಿಸಲು ಧ್ಯಾನ್ ಚಂದ್ ಅವರ ಪರಿಶ್ರಮ ಅಪಾರವಾಗಿತ್ತು , ಜರ್ಮನಿಯ ಹಿಟ್ಲರ್ ಅವರು, ಜರ್ಮನಿ ಪರವಾಗಿ ಆಟ ಆಡುವಂತೆ ಏನ್ನೆಲ್ಲ ಆಸೆಗಳನ್ನು ತೋರಿಸಿದರು ಕೂಡ!?, ನನ್ನ ಜನ್ಮ ನೀಡಿದ ಭಾರತ ದೇಶವನ್ನು ಬಿಟ್ಟು ಅನ್ಯ ದೇಶಗಳ ಪರವಾಗಿ ನಾನು ಆಡಲಾರೆ ಎಂದು ತನ್ನ ದೇಶಪ್ರೇಮವನ್ನು ಮೆರೆದ ಮಹಾನ್ ಚೇತನ ಅವರಾಗಿದ್ದರು ಎಂದು ನುಡಿದರು.
ಅವರಿಗೆ 1956 ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು, ಇದು ಭಾರತದ ಮೂರನೇ ಅತಿದೊಡ್ಡ ನಾಗರಿಕ ಗೌರವವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದೈಹಿಕ ಶಿಕ್ಷಣ ವಿಭಾಗದ ಡಾ.ಶಶಿಧರ್ ಕೆಲ್ಲೂರ ಮಾತನಾಡಿ, ಇಡೀ ದೇಶವೇ ಹೆಮ್ಮೆಪಡುವಂತಹ ಅಪ್ರತಿಮ ಹುಟ್ಟು ಪ್ರತಿಭಾವಂತ ಧ್ಯಾನ್ ಚಂದ್ ಅವರ ಸಾಧನೆಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದರು.
ಸಹಾಯಕ ಪ್ರಾಧ್ಯಾಪಕ ಡಾ. ಸಂಪತ್ ಕುಮಾರ್, ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಮರಾಗಿ, ಯೋಗ ಉಪನ್ಯಾಸಕ ಮಹೇಶ್, ಎಂಪಿಡಿ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪದಕ ಮತ್ತು ಪಾರಿತೋಷಕಗಳನ್ನು ನೀಡಲಾಯಿತು
ರಮೇಶ್ ಕೆ. ಡಿ .ಕಾರ್ಯಕ್ರಮವನ್ನು ನಿರೂಪಿಸಿದರು. ಭಾರತಿ, ಮೌನಿಕ ಪ್ರಾರ್ಥಿಸಿದರು.