ಧ್ಯಾನದಲ್ಲಿ ಮೋದಿ ತಲ್ಲೀನ

ನವದೆಹಲಿ,ಮೇ.೩೧- ಲೋಕಸಭೆಯ ಎರಡು ತಿಂಗಳ ಸುದೀರ್ಘ ಚುನಾವಣಾ ಪ್ರಚಾರ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದಲ್ಲಿ ೪೫ ಗಂಟೆಗಳ ಕಾಲ ಧ್ಯಾನ ಕೈಗೊಂಡಿದ್ದಾರೆ.
ಕಿತ್ತಳೆ ಬಣ್ಣದ ಉಡುಗೆ ತೊಟ್ಟು ಪ್ರಧಾನಿ ಮೋದಿ ಅವರು ಸ್ವಾಮಿ ವಿವೇಕಾನಂದರ ಪ್ರತಿಮೆಯ ಮುಂದೆ ಧ್ಯಾನ ಮಾಡುತ್ತಿದ್ದು ನಾಳೆ ಮಧ್ಯಾಹ್ನದವರೆಗೆ ಧ್ಯಾನ ಮಾಡಲಿದ್ದಾರೆ. ಈ ಅವಧಿಯಲ್ಲಿ ನೀರು ಮತ್ತು ಹಣ್ಣಿನ ರಸ ಮಾತ್ರ ಸೇವನೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ನಿನ್ನೆಯಿಂದಲೇ ಧ್ಯಾನ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರ ೪೫ ಗಂಟೆ ಧ್ಯಾನದಲ್ಲಿ ತಲ್ಲೀನರಾಗಲಿದ್ದಾರೆ.
೧೮೯೨ ರಲ್ಲಿ ಸ್ವಾಮಿ ವಿವೇಕಾನಂದರು ಮೂರು ದಿನಗಳ ಕಾಲ ಧ್ಯಾನ ಮಾಡಿದ ಸ್ಥಳವಾಗಿದೆ. ಈ ಬಂಡೆಯು ಶ್ರೀಪಾದ ಮಂಟಪವನ್ನು ಹೊಂದಿರುವ ವಿಶೇಷ ಸಭಾಂಗಣವನ್ನು ಹೊಂದಿದೆ, ಇಲ್ಲಿ ಪಾರ್ವತಿ ದೇವಿ, ಸಾಕ್ಷತ್ ಶಿವನನ್ನು ಧ್ಯಾನಿಸಿದರು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸಂಜೆ ೪.೪೫ರ ಸುಮಾರಿಗೆ ತಿರುವನಂತಪುರದಿಂದ ಕನ್ಯಾಕುಮಾರಿಗೆ ಹಾರಿ ಕರಾವಳಿಯಲ್ಲಿರುವ ಭಗವತಿ ಅಮ್ಮನ್ ದೇವಸ್ಥಾನಕ್ಕೆ ಆಗಮಿಸಿಪಾರ್ವತಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು, ನಂತರ ದೇವಾಲಯದ ಅಧಿಕಾರಿಗಳು ಅವರಿಗೆ ದೇವರ ಚಿತ್ರವನ್ನು ನೀಡಿ ಗೌರವಿಸಿದರು,
ನಂತರ ಪ್ರಧಾನಿ ಮೋದಿ ವಿವೇಕಾನಂದ ರಾಕ್‌ಗೆ ದೋಣಿ ವಿವಾರ ನಡೆಸಿದರು. ಸ್ವಾಮಿ ವಿವೇಕಾನಂದರ ಪ್ರತಿಮೆ ಮತ್ತು ಪರಮಹಂಸ ಮತ್ತು ಶಾರದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮೋದಿ ಧ್ಯಾನ ಪ್ರಾರಂಭಿಸಿದರು.

೨೦೧೪ ಮತ್ತು ೨೦೧೯ ರ ಲೋಕಸಭಾ ಚುನಾವಣಾ ಪ್ರಚಾರದ ಕೊನೆಯಲ್ಲಿ ಕ್ರಮವಾಗಿ ಪ್ರತಾಪ್‌ಗಢ ಮತ್ತು ಕೇದಾರನಾಥದಲ್ಲಿ ಪ್ರಧಾನಿ ಇದೇ ರೀತಿಯ ಪ್ರವಾಸ ಕೈಗೊಂಡಿದ್ದರು. ಈ ವರ್ಷದ ಜನವರಿಯಿಂದ ತಮಿಳುನಾಡಿಗೆ ಪ್ರಧಾನಿಯವರು ಕೈಗೊಳ್ಳುತ್ತಿರುವ ಒಂಬತ್ತನೇ ಪ್ರವಾಸ ಇದಾಗಿದೆ.
ಪ್ರವಾಸಿಗರ ನಿರಂತರ ಹರಿವನ್ನು ಕಾಣುವ ಬಂಡೆ ಮತ್ತು ಕನ್ಯಾಕುಮಾರಿ ಪಟ್ಟಣದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಮಧ್ಯಾಹ್ನದ ನಂತರ ಭಗವತಿ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಿದೆ. ವಿವೇಕಾನಂದ ರಾಕ್ ನಲ್ಲಿ ನಾಳೆ ತನಕ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಭದ್ರತೆಗಾಗಿ ಬರೋಬ್ಬರಿ ೩,೦೦೦ಕ್ಕೂ ಹೆಚ್ಚು ಪೊಲೀಸರು ನಿಯೋಜಿಸಲಾಗಿದ್ದು ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಹಡಗುಗಳು ಸಮುದ್ರದ ಸುತ್ತಲೂ ಗಸ್ತು ತಿರುಗುತ್ತಿದ್ದು ಈ ಭಾಗದಲ್ಲಿ ಮೂರು ದಿನಗಳಿಂದ ಮೀನುಗಾರಿಕೆ ಸ್ಥಗಿತಗೊಳಿಸಲಾಗಿದೆ.