ಧೋತಿ, ರುಮಾಲು ಧರಿಸಿ ಕೋಲಾಟವಾಡಿದ ಸಚಿವ ಪ್ರಭು ಚವ್ಹಾಣ್

ಬೀದರ, ಮಾ.30: ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಮಾ.29ರಂದು ತಮ್ಮ ಸ್ವ-ಗ್ರಾಮವಾದ ಬೋಂತಿ ತಾಂಡಾದಲ್ಲಿ ಗ್ರಾಮಸ್ಥರೊಂದಿಗೆ ಬಂಜಾರಾ ಸಂಪ್ರದಾಯದಂತೆ ಹೋಳಿ ಹಬ್ಬವನ್ನು ಆಚರಿಸಿದರು.

ಬೆಳಗ್ಗೆ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಗ್ರಾಮದಲ್ಲಿರುವ ಇಚ್ಛಾಪೂರ್ತಿ ಜಗದಂಬಾ ಮಾತಾ ಹಾಗೂ ಕುಲಗುರು ಸಂತ ಸೇವಾಲಾಲ ಮಹಾರಾಜರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಜನತೆಗೆ ಮಾರಕವಾಗಿ ಪರಿಣಮಿಸಿರುವ ಕೊರೊನಾ ಸೋಂಕು ಬೇಗ ನಿವಾರಣೆಯಾಗಲಿ. ಉತ್ತಮ ಮಳೆ, ಬೆಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಪ್ರಾರ್ಥಿಸಿದರು.

ಬಳಿಕ ಬಂಜಾರಾ ಸಂಸ್ಕøತಿಯಂತೆ ಬಿಳಿ ಧೋತಿ, ಗುಲಾಬಿ ಬಣ್ಣದ ರುಮಾಲು, ಬಂಜಾರ ಕುಶಲಕಲೆಯ ಶಲ್ಯೆ ಧರಿಸಿ, ಸೊಂಟಕ್ಕೆ ಶಾಲು ಸುತ್ತಿಕೊಂಡು ಗ್ರಾಮದ ಯುವಕರೊಂದಿಗೆ ಕೋಲಾಟವಾಡಿದರು. ಬಂಜಾರಾ ನೃತ್ಯ ಮಾಡುತ್ತಿದ್ದ ಮಹಿಳೆಯರೊಂದಿಗೆ ತಾವೂ ಹೆಜ್ಜೆ ಹಾಕಿದರು. ಗ್ರಾಮಸ್ಥರೊಂದಿಗೆ ಬಣ್ಣ ಆಡುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದರು.

ಹಿರಿಯರು, ಮಹಿಳೆಯರು, ಯುವಕ-ಯುವತಿಯರು, ಮಕ್ಕಳು ಬಣ್ಣದಾಟ, ಹಾಡು, ನೃತ್ಯದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಜನ ಸೇರಿದ್ದರು.

ಬಳಿಕ ಮಾತನಾಡಿದ ಸಚಿವರು, ಬಂಜಾರಾ ಸಮಾಜದಲ್ಲಿ ಹೋಳಿ ಹಬ್ಬ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಈ ಹಬ್ಬದಂದು ಗ್ರಾಮದ ಜನರೆಲ್ಲಾ ಒಂದೆಡೆ ಸೇರಿ ದೇವರಿಗೆ ಪೂಜೆ ಸಲ್ಲಿಸಿ, ಎಲ್ಲರೂ ಬಂಜಾರಾ ಸಂಪ್ರದಾಯದಂತೆ ವೇಷಭೂಷಣ ಧರಿಸಿ, ಹಾಡಿ, ಕುಣಿದು, ಬಣ್ಣದಾಟ ಆಡಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಸೋಂಕು ಉಲ್ಬಣಿಸುತ್ತಿರುವುದರಿಂದ ಹಬ್ಬವನ್ನು ಆಯಾ ಗ್ರಾಮಗಳಲ್ಲಿ ಹೆಚ್ಚು ಜನ ಸೇರದೇ ಸರಳವಾಗಿ ಆಚರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಾರುತಿ ಚವ್ಹಾಣ್, ಮುಖಂಡರಾದ ಸಚಿನ ರಾಠೋಡ್, ಸುಭಾಷ ರಾಠೋಡ, ವಸಂತ ರಾಠೋಡ, ಬಳಿರಾಮ ಪವಾರ, ಪಂಢರಿನಾಥ ರಾಠೋಡ್, ವಿನಾಯಕ ರಾಠೋಡ, ಅಂಕುಶ ಪವಾರ, ದೇವಿದಾಸ ಪವಾರ ಹಾಗೂ ಇತರರು ಉಪಸ್ಥಿತರಿದ್ದರು.