ಧೋಣಿ ನದಿಯಿಂದ ಉಕ್ಕಿದ ನೀರು: ಪ್ರವಾಹ ಪೀಡಿತ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳ ಭೇಟಿ

ವಿಜಯಪುರ ಆ.6: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಆಗಸ್ಟ್ 4ರಂದು ಸುರಿದ ರಭಸದ ಮಳೆಗೆ ದೋನಿ ನದಿ ತುಂಬಿ ಹರಿದಿರುವುದರಿಂದ ಈ ನದಿ ಅಂಚಿನ ಗ್ರಾಮಗಳಾದ ಸಾರವಾಡ, ದನ್ಯಾಳ ಮತ್ತು ದಾಸ್ಯಾಳ ಗ್ರಾಮಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆಗಸ್ಟ್ 5ರಂದು ಆಯಾ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಮೊದಲಿಗೆ ಸಾರವಾಡ ಗ್ರಾಮಕ್ಕೆ ತೆರಳಿ, ನದಿನೀರಿನಿಂದಾಗಿ ಆ ಗ್ರಾಮದ ರಸ್ತೆಗಳ ಮೇಲೆ ನೀರು ಹರಿಯುತ್ತಿರುವದನ್ನು ನೋಡಿದರು. ಬಳಿಕ ದನ್ಯಾಳ ಮತ್ತು ದಾಸ್ಯಾಳ ಗ್ರಾಮಕ್ಕೆ ಭೇಟಿ ನೀಡಿದರು. ನೀರು ರಭಸವಾಗಿ ಹರಿದು ರಸ್ತೆ ಸಂಚಾರ ಸ್ಥಗಿತಗೊಂಡಿರುವುದನ್ನು ಸಹ ವೀಕ್ಷಣೆ ನಡೆಸಿದರು.
ನದಿ ತುಂಬಿ ಹರಿಯುತ್ತಿರುವುದರಿಂದ ರಸ್ತೆಗಳ ಮೇಲೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಗಿತ್ತು. ನೀರಿನ ಹರಿವು ಕಡಿಮೆಯಾದಂತೆ ರಸ್ತೆ ಮೇಲೆ ನೀರು ಹರಿಯುವುದು ನಿಂತಿದೆ. ಮನೆಗಳಿಗೆ ಹಾನಿಯಾಗಿದೆ. ಬೆಳೆಹಾನಿಯಾಗಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಮತ್ತೆ ಮಳೆಯಿಂದಾಗಿ ನದಿ ತುಂಬಿ ಹರಿದು ಪ್ರವಾಹ ಬಂದು ನದಿ ಅಂಚಿನ ಗ್ರಾಮಗಳಿಗೆ ನೀರು ಹೊಕ್ಕಲ್ಲಿ ಪೈಪ್‍ಮೂಲಕ ನೀರನ್ನು ಹೊರಸಾಗಿಸುವ ಕಾರ್ಯ ನಡೆಸಲು ಸದಾಕಾಲ ಸನ್ನದ್ಧರಾಗಿರಲು ಕ್ರಮ ವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ತಾಪಂ ಇಓ ಅವರಿಗೆ ನಿರ್ದೇಶನ ನೀಡಿದರು.
ಪ್ರವಾಹದಿಂದಾಗಿ ಬೆಳೆಹಾನಿಯಾದ ಬಗ್ಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳು ಒಟ್ಟುಗೂಡಿ ಜಂಟಿ ಸಮೀಕ್ಷೆ ನಡೆಸಿ ಬೆಳೆಹಾನಿ ಪರಿಹಾರಕ್ಕೆ ತಕ್ಷಣ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಹಸೀಲ್ದಾರ ಅವರಿಗೆ ನಿರ್ದೇಶನ ನೀಡಿದರು.
ಬಳಿಕ ತಿಕೋಟಾ ತಾಲೂಕಿಗು ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ದೋಣಿ ನದಿ ತುಂಬಿ ಹರಿದು ಪ್ರವಾಹಕ್ಕೊಳಗಾದ ಕೋಟ್ಯಾಳ, ಹರನಾಳ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ತಹಸೀಲ್ದಾರ, ತಾಪಂ ಇಓ ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.