`ಧೈರ್ಯ-ಮುಂಜಾಗರೂಕತೆ’ ಕೊರೊನಾ ವಿರುದ್ಧ ಜಯ

ಪುತ್ತೂರು, ಮೇ ೧೮-ಸಾಕಷ್ಟು ಮುಂಜಾಗರೂಕತೆ ಮತ್ತು ಧೈರ್ಯ ಇದ್ದರೆ ಕೊರೊನಾದಂತಹ ಯಾವುದೇ ಮಾರಕ ವೈರಸ್ ವಿರುದ್ಧ ಹೋರಾಡಿ ಜಯಗಳಿಸಬಹುದು ಎಂದು ಖ್ಯಾತ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ  ಕೊರೋನಾ ನಿವಾರಣೆಗೆ ನಾವೇನು ಮಾಡಬೇಕು ಎನ್ನುವ ವಿಷಯದ ಬಗ್ಗೆ ನಡೆದ ಆನ್‌ಲೈನ್ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ರೋಗ ಬಂದ ನಂತರ ಕೊರಗುವ ಬದಲಾಗಿ ರೋಗ ಬರದಂತೆ ಎಚ್ಚರ ವಹಿಸುವುದು ಅತೀ ಅಗತ್ಯ.  ನಾವು ನಿತ್ಯ ಬಳಸುವ ಸಾಂಬಾರ ಪದಾರ್ಥಗಳಲ್ಲಿ ಅಪಾರ ಔಷಧೀಯ ಗುಣಗಳಿವೆ ಅದನ್ನು ನಿಯಮಿತವಾಗಿ ಸೇವಿಸುವುದರಿಂದ ರೊಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬಹುದು. ನಮ್ಮ ಸುತ್ತಮುತ್ತ ಸಿಗುವ ಶುಂಠಿ, ಕಾಳುಮೆಣಸು, ಅಶ್ವಗಂಧ, ಹಿಪ್ಪಿಲಿ, ಲಾವಂಚ, ತುಳಸಿ, ನೆಲನೆಲ್ಲಿ, ಭದ್ರಮುಷ್ಟಿ, ಅಮೃತಬಳ್ಳಿ ಮುಂತಾದ ಸಸ್ಯಗಳು, ಕಾಳುಗಳು ಮತ್ತು ಬೇರುಗಳನ್ನು ಬಳಸಿ ಕಷಾಯ, ತಂಬುಳಿ ಅಥವಾ ಸೂಪ್‌ಗಳನ್ನು ತಯಾರಿಸಿ ಕುಡಿಯಬೇಕು. ಶೀತಲವಾದ ಆಹಾರ ಮತ್ತು ಪಾನೀಯಗಳನ್ನು ತ್ಯಜಿಸಿ ಬಿಸಿಯಾದ ಆಹಾರವನ್ನೇ ಸೇವಿಸಬೇಕು. ಅಧಿಕ ಎಣ್ಣೆಯುಳ್ಳ ಆಹಾರ ಆರೋಗ್ಯಕ್ಕೆ ಹಿತಕಾರಿಯಲ್ಲ. ಕೊರೊನಾ ಲಕ್ಷಣಗಳು ಕಂಡುಬಂದರೆ ಧೈರ್ಯಗೆಡದೆ ಅನಿವಾರ್ಯವಾದರೆ ಮಾತ್ರ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಿದ ಅವರ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಕೊರೊನಾ ಭಾದಿತರೂ ಭಾಗವಹಿಸಿ ಸೂಕ್ತ ಸಲಹೆಗಳನ್ನು ಪಡೆದುಕೊಂಡರು.

ಸ್ವದೇಶಿ ಜಾಗರಣ್ ಮಂಚ್‌ನ ಜಗದೀಶ್ ಅವರ ಸಹಕಾರದೊಂದಿಗೆ ವಿಭಾಗ ಮುಖ್ಯಸ್ಥ ಡಾ.ಆನಂದ್ ವಿ ಆರ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಶಿಶಿರಕೃಷ್ಣ ಮತ್ತು ಪ್ರೊ. ಸುಬ್ರಮಣ್ಯ ಆರ್ ಎಂ ಕಾರ್ಯಕ್ರಮ ಸಂಘಟಿಸಿದರು.