ಧೃತಿಗೆಡದೆ ಪ್ರತಿಜ್ಞೆ ಮಾಡಿ ಛಲದಿಂದ ಓದಿದರೆ ಪಿಯುಸಿ ಉತ್ತೀರ್ಣ ಸಾಧ್ಯ

ಕೋಲಾರ, ಮೇ,೯-ಸಮಾಜದ ದೊಡ್ಡ ದೊಡ್ಡ ಮಹನೀಯರೆಲ್ಲರೂ ಸಂಕಷ್ಟಗಳ ಮಧ್ಯೆ ಕಷ್ಟಪಟ್ಟು ಓದಿ ಮುಂದೆ ಬಂದವರೆ ಆಗಿದ್ದಾರೆ. ಪಿಯುಸಿಯಲ್ಲಿ ಫೇಲಾದವರೆಲ್ಲ ದಡ್ಡರಲ್ಲ. ಕಾರಣಾಂತರಗಳಿಂದ ನಿರಂತರ ಅಧ್ಯಯನ ಮಾಡಲಾಗದೆ ಫೇಲಾಗಿದೆ. ಫೇಲ್ ಆಗಿದ್ದೀನಿ ಎಂಬ ಗೀಳನ್ನು ಬಿಟ್ಟು ಧೃತಿಗೆಡದೆ ಪ್ರತಿಜ್ಞೆ ಮಾಡಿ ಶ್ರದ್ದೆಯಿಂದ ಓದಿದರೆ ಪಿಯು ಮರುಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮ ಮುಂದಿನ ವಿದ್ಯಾಭ್ಯಾಸ ಮುಂದುವರೆಸಲು ಖಂಡಿತ ಸಾಧ್ಯವೆಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ರಾಮಚಂದ್ರಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಅಂತರಗಂಗೆ ರಸ್ತೆಯ ಸುಗುಣ ನರ್ಸಿಂಗ್ ಹೋಂ ಕಟ್ಟಡದಲ್ಲಿ ಹೆಚ್.ಆರ್.ಡಿ.ಸಿ. ಸಂಸ್ಥೆ ದ್ವಿತೀಯ ಪಿಯುಸಿ ಮರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಉಚಿತ ಟ್ಯೂಷನ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ಹತ್ತು ವರ್ಷಗಳ ಹಿಂದೆ ಮುಖ್ಯ ಪರೀಕ್ಷೆಯಲ್ಲಿ ಫೇಲಾದವರು ಮತ್ತೆ ಪರೀಕ್ಷೆ ಬರೆಯಲು ಒಂದು ವರ್ಷ ಕಾಯಬೇಕಿತ್ತು. ಆದರೆ ಈಗ ಆ ರೀತಿ ಇಲ್ಲ ಒಂದೇ ತಿಂಗಳಲ್ಲಿ ಮರುಪರೀಕ್ಷೆ ಬರೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಮರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಲ್ಲಾ ವಿದ್ಯಾರ್ಥಿಗಳ ಸಮನಾಗಿ ಮುಂದುವರೆಯಬಹುದಾಗಿದೆ. ಹೆಚ್.ಆರ್.ಡಿ.ಸಿ. ಕೌಶಲ್ಯ ತರಬೇತಿ ಸಂಸ್ಥೆ ಉಚಿತವಾಗಿ ಟ್ಯೂಷನ್‌ನನ್ನು ಏರ್ಪಡಿಸಿರುವುದನ್ನು ಶ್ಲಾಘಿಸುತ್ತಾ ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಉಚಿತ ತರಗತಿ ಎಂಬ ಉದಾಸೀನತೆ ತೋರದೆ ಸಕಾಲಕ್ಕೆ ಹಾಜರಾಗಿ ಪಾಠ ಕೇಳಿ ದಿನಕ್ಕೆ ಮೂರು ನಾಲ್ಕು ಗಂಟೆಗಳ ಸತತ ಅಧ್ಯಯನ ಮಾಡಿ ಮರುಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ವಿದ್ಯಾಭ್ಯಾಸದ ಮೂಲಕ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಜಿಲ್ಲಾ ಪಿಯು ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ಜಯರಾಮ್ ರವರು ಮಾತನಾಡಿ ವಿದ್ಯಾರ್ಥಿಗಳು ಫೇಲಾದಾಗ ತಂದೆ ತಾಯಿಯರಿಗೆ ತುಂಬಾ ನೋವಾಗುತ್ತದೆ. ಸಮುದಾಯ ಸಹ ತಮ್ಮನ್ನು ಕೀಳಾಗಿ ಸಹ ನೋಡುತ್ತದೆ. ಮರುಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ, ಅಭ್ಯಸಿಸಿ ಯಶಸ್ವಿಯಾಗುವಂತೆ ತಿಳಿಸಿದರು.
ಹೆಣ್ಣು ಮಕ್ಕಳು ಮೆಂಟಲಿ ಸ್ಟ್ರಾಂಗ್ ಆಗಿದ್ದು ಯಾವುದೇ ಕಾರಣಕ್ಕೂ ಮೊಬೈಲ್ ಗೀಳಿಗೆ ಬೀಳಬಾರದು ಅದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಮೊಬೈಲ್ ನಿಂದ ದೂರವಿದ್ದು ಶ್ರದ್ಧೆಯಿಂದ ಪಾಠ ಕೇಳಿದ್ದನ್ನು ಓದಿ ಬರೆಯುವುದನ್ನು ಅಭ್ಯಸಿಸಿದರೆ ಖಂಡಿತ ಕಳೆದುಕೊಂಡಿದ್ದನ್ನು ಗಳಿಸಿಕೊಂಡು ಮುಂದಿನ ತರಗತಿಗೆ ಸೇರಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿಯಾದ ಪ್ರಸನ್ನ ಕುಮಾರಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮತ್ತೊಬ್ಬ ಮುಖ್ಯ ಅತಿಥಿಯಾಗಿ ಚಿಂತಕರು ಹಾಗೂ ಮಾಜಿ ಕ.ಸಾ.ಪ ಜಿಲ್ಲಾಧ್ಯಕ್ಷರಾದ ಜೆ.ಜಿ.ನಾಗರಾಜ್ ಮಾತನಾಡಿ, ಒಂದು ಅಥವಾ ಎರಡು ವಿಷಯದಲ್ಲಿ ಪಿಯುಸಿ ಫೇಲಾಗಿದೆ ಎಂಬ ಸಂಕಟ ಪಡುವುದು ಬೇಡ. ಸರಿಯಾಗಿ ಓದದೇ ಅತಿ ಗ್ಯಾರಂಟಿ ಮುಂತಾದ ಕಾರಣಗಳಿಂದ ಫೇಲಾಗಿದೆ.
ಮುಖ್ಯ ಪರೀಕ್ಷೆಯಲ್ಲಿ ಆರು ವಿಷಯಗಳಿಗೆ ಓದಿದವರು ಈಗ ಒಂದೆರಡು ವಿಷಯಗಳಿಗೆ ಓದುವುದು ಕಷ್ಟವೇ ಅಲ್ಲ. ಫೇಲಾಗಿರುವುದನ್ನೇ ಸವಾಲಾಗಿ ಸ್ವೀಕರಿಸಿ ಮೊಬೈಲ್ ಗೀಳಿಗೆ ಹೋಗದೆ ಉಳಿದಿರುವ ೧೫- ೨೦ ದಿನಗಳ ಕಾಲ ಅಭ್ಯಸಿಸಿದರೆ ಅದ್ಬುತ ಸಾಧನೆ ಮಾಡಬಹುದು. ಈಗ ಪಡೆದಿರುವ ವಿಷಯಗಳಲ್ಲಿ ಪಡೆದಿರುವ ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ಪಡೆಯಲು ಪಣ ತೊಟ್ಟು ಓದಲು ಕರೆ ನೀಡಿದರು.
ಚಿಂತಕರು ಹಾಗೂ ಪಿಯು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಟಿ.ಕೆ ನಟರಾಜ್ ಮಾತನಾಡಿ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಪಿಯು ಫೇಲಾಗಿರುವ ಮಕ್ಕಳಿಗೆ ಉಚಿತವಾಗಿ ನುರಿತ ಉಪನ್ಯಾಸಕರಿಂದ ಟ್ಯೂಷನ್ ಏರ್ಪಡಿಸಿರುವುದು ಶ್ಲಾಘನೀಯ ವಿಷಯವಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವಂತೆ ಆಳ್ವ್ಸ್ ಥಾಮಸ್ ಎಡಿಸನ್ ಕರೆಂಟ್ ಬಲ್ಬನ್ನು ಕಂಡು ಹಿಡಿದ ಪ್ರಸಂಗವನ್ನು ಉದರಿಸಿ ಸತತ ಪ್ರಯತ್ನದಿಂದ ಜಯಶೀಲರಾದ ಪ್ರಸಂಗವನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಮುಖಾಂತರ ಸೋಲನ್ನು ಗೆಲುವಾಗಿ ಮಾರ್ಪಡಿಸುವ ಛಲವನ್ನು ಹೊಂದಿ ಸತತ ಪ್ರಯತ್ನ ಮಾಡಿ ಯಶಸ್ವಿಯಾಗುವಂತೆ ಕರೆ ನೀಡಿದರು.
ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಸಂಸ್ಥೆಯ ನಿರ್ದೇಶಕರಾದ ಎಂ.ವಿ.ನಾರಾಯಣಸ್ವಾಮಿ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕರಾದ ಸುಧಾಕರ್ ಸ್ವಾಗತಿಸಿ, ಶಿಕ್ಷಕರಾದ ಮುನಿಯಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಮುಖ್ಯಸ್ಥರಾದ ಗಂಗಾಧರ್ ಗೋಟ್ಯಾಳ್, ಮನೋಜ್ ಕುಮಾರ್, ಪೂರ್ಣಿಮಾ, ಉಪನ್ಯಾಸಕರಾದ ಚೌಡಪ್ಪ, ಶಶಿಕುಮಾರ್ ಮುಂತಾದವರು ಹಾಜರಿದ್ದರು.