ಧೂಮಪಾನ ರಹಿತ ಜೀವನ ಅಗತ್ಯ

ಕಲಬುರಗಿ:ಮೇ.31: ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಯುವ ಶಕ್ತಿಯಿದೆ. ರಾಷ್ಟ್ರ ಅಭಿವೃದ್ಧಿಯಲ್ಲಿ ಸದೃಢ ಮಾನವ ಸಂಪನ್ಮೂಲ ತುಂಬಾ ಅಗತ್ಯವಾಗಿದೆ. ಅದರಲ್ಲಿಯೂ ಯುವಕರು ರಾಷ್ಟ್ರದ ಶಕ್ತಿಯಾಗಿದ್ದಾರೆ. ಇಂತಹ ಶಕ್ತಿಗಳು ಧೂಮಪಾನದಂತಹ ವ್ಯಸನಿಗಳಾಗಿ, ಅದಕ್ಕೆ ಬಲಿಯಾಗುತ್ತಿದ್ದಾರೆ. ಜೀವನವನ್ನು ಆಯ್ಕೆ ಮಾಡಿಕೊಳ್ಳಬೇಕೆ ಹೊರತು, ತಂಬಾಕನಲ್ಲ. ಧೂಮಪಾನ ರಹಿತ ಜೀವನಶೈಲಿ ಅಳವಡಿಸಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಅಭಿಪ್ರಾಯಪಟ್ಟರು.

ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸೆ’್ಥ ಇವುಗಳ ಸಹಯೋಗದೊಂದಿಗೆ ಜರುಗಿದ ‘ವಿಶ್ವ ಧೂಮಪಾನ ರಹಿತ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.

  ತಂಬಾಕು ಹಾಗೂ ಅದರ ಉತ್ಪನ್ನಗಳು, ಗುಟಕಾದಿಂದ ಕ್ಯಾನ್ಸರ್ ರೋಗ ಉಂಟಾಗುತ್ತದೆ. ಅನ್ನನಾಳಕ್ಕೆ ಎಸಿಡ್ ಸುರಿದು, ಹೊಟ್ಟೆ ನೋವು, ಗಂಟಲು ಕ್ಯಾನ್ಸರ್, ಪಾರ್ಕಿನಸನ್ ರೋಗ, ನಪುಂಸತತ್ವದಂತಹ ರೋಗಗಳು ಉಂಟಾಗುತ್ತವೆ. ಗುಟಖಾ ಸೇವಿಸುವುದರಿಂದ ಬಾಯಿಯ ಲೋಳೆಪರೆಯು ಗಡುಸಾಗಿ, ಬಾಯಿಯ ಚಟುವಟಿಕೆಗಳಿಗೆ ಅಡ್ಡಿ ಉಂಟಾಗಿ, ಕೊನೆಗೆ ಅದರ ಚಟುವಟಿಕೆ ಸ್ಥಗಿತಗೊಳಿಸುತ್ತದೆ. ಇದರಲ್ಲಿರುವ ಮೆಂಥೋಲ್ ಅಂಶ ಬಾಯಿಯ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ಅನ್ನ ನಾಳದಲ್ಲಿ ಹುಣ್ಣಾಗುವುದು, ಆಹಾರ ಸೇವಿಸಿದರೆ ವಾಂತಿಯಾಗುವುದು ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ತಂಬಾಕು ಸೇವನೆಯಿಂದ ದೂರವಿರಬೇಕೆಂದು ಸಲಹೆ ನೀಡಿದರು.

  ಪ್ರಮುಖರಾದ ಎಚ್.ಬಿ.ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಎಚ್.ಮಂಗಾಣೆ, ಗಂಗಾಜ್ಯೋತಿ ಗಂಜಿ, ಚಂದಮ್ಮ ಮರಾಠಾ, ಜಗನ್ನಾಥ ಗುತ್ತೇದಾರ, ಗುರುರಾಜ ಖೈನೂರ್, ರೇಷ್ಮಾ ಆರ್.ನಕ್ಕುಂದಿ, ಸಂಗಮ್ಮ ಅತನೂರ, ಲಕ್ಷ್ಮೀ ಮೈಲಾರಿ, ಅರ್ಚನಾ ಸಿಂಗೆ, ಶ್ರೀದೇವಿ ಸಾಗರ, ಸಾವಿತ್ರಿ, ನಾಗಮ್ಮ ಇದ್ದರು.