ಧೂಪತಮಗಾಂವ ಗ್ರಾಂ ಪಂಚಾಯತ್ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ

ಬೀದರ‌:ಮಾ.23: ಕೆರೆ ಪುನರುಜ್ಜೀವನಗೊಳಿಸಿ ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿದ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಔರಾದ್‌ ತಾಲ್ಲೂಕಿನ ಧೂಪತ್‌ಮಹಾಗಾಂವ ಗ್ರಾಮ ಪಂಚಾಯಿತಿಯ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿ ಅವರು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರೊಂದಿಗೆ ಸೋಮವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಈ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಜೊನ್ನಿಕೆರೆ ಭಾಗವಹಿಸಿದ್ದರು.

‘ನಮ್ಮ ಗ್ರಾಮದಲ್ಲಿರುವ 12ನೇ ಶತಮಾನದ ಗೊಗ್ಗವೆ ಕೆರೆ ಎರಡು ವರ್ಷಗಳ ಹಿಂದೆ ಬತ್ತಿ ಹೋಗಿತ್ತು. ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಮ ಸಭೆ ನಡೆಸಿ ನರೇಗಾ ಯೋಜನೆಯಲ್ಲಿ 120 ಜನ ಸೇರಿಕೊಂಡು ಕೆರೆ ಹೂಳೆತ್ತಿದೆವು. ಈಗ ಕೆರೆಯಲ್ಲಿ ನೀರು ಸಂಗ್ರಹವಾಗಿದೆ.ಇದೇ ಕೆರೆಯಿಂದ ಗ್ರಾಮದ 800 ಜನರಿಗೆ ಕುಡಿಯುವ ನೀರು ಪೂರೈಸುತ್ತಿದ್ದೇವೆ. ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ’ ಎಂದು ಶ್ರೀನಿವಾಸ ವಿವರಿಸಿದರು.
‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಹೀಗಾಗಿ ಜನರು ಪಂಚಾಯಿತಿಯೊಂದಿಗೆ ಕೈಜೋಡಿಸಿದರು. ಗ್ರಾಮದ ಪರಿಸರದಲ್ಲಿ ಅಂತರ್ಜಲ ಮಟ್ಟ 400 ಅಡಿ ಆಳದ ವರೆಗೆ ಕುಸಿದಿತ್ತು. ಕೆರೆಯಲ್ಲಿ ನೀರು ನಿಲ್ಲಿಸಿದ ನಂತರ ಅಂತರ್ಜಲ ಮಟ್ಟ 150 ಅಡಿ ವರೆಗೆ ಬಂದಿದೆ’ ಎಂದು ತಿಳಿಸಿದರು.

‘ಅಕ್ಕಪಕ್ಕದ ಗ್ರಾಮಗಳ ಜನರು ನಮ್ಮ ಕೆಲಸ ನೋಡಲು ಬರುತ್ತಿದ್ದಾರೆ. ನಮ್ಮ ಯಶೋಗಾಥೆಯನ್ನು ಆಸಕ್ತಿಯಿಂದ ಆಲಿಸುತ್ತಿದ್ದಾರೆ. ನಾವು ಬೇರೆ ಬೇರೆ ಪಂಚಾಯಿತಿಗಳಿಗೆ ತೆರಳಿ ಜಲ ಸಂರಕ್ಷಣೆಯ ಮಾಹಿತಿ ನೀಡುತ್ತಿದ್ದೇವೆ’ ಎಂದು ಹೇಳಿದರು.

ಜಲಸಂರಕ್ಷಣೆಗೆ ಮುಂದಾಗಿ: ‘ದೇಶದ ಗ್ರಾಮ ಪಂಚಾಯಿತಿಗಳು ಸ್ವಪ್ರೇರಣೆಯಿಂದ ಜಲ ಸಂರಕ್ಷಣೆಯ ಕಾರ್ಯ ಕೈಗೆತ್ತಿಕೊಳ್ಳಬೇಕು. ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕು. ಮುಂಗಾರನ್ನು ಹಬ್ಬದ ಮಾದರಿಯಲ್ಲಿ ಬರಮಾಡಿಕೊಳ್ಳಬೇಕು. ನೀರು ಉಳಿಸುವುದು ಅಷ್ಟೇ ಅಲ್ಲ, ಅದನ್ನು ಸಮರ್ಪಕವಾಗಿ ಬಳಸುವುದಕ್ಕೂ ಮಹತ್ವ ಕೊಡಬೇಕು’ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

‘ಜಲ ಸಂರಕ್ಷಣೆಗೆ ಬುಡಕಟ್ಟು ಸಮುದಾಯದವರೇ ನಮಗೆ ಮಾದರಿ. ಬೆಟ್ಟಗುಡ್ಡಗಳಲ್ಲಿ ವಾಸವಾಗಿದ್ದರೂ ಅವರಿಗೆ ನೀರಿನ ಮಹತ್ವ ಗೊತ್ತಿದೆ. ನೀರಿನ ಗಂಭೀರ ಸಮಸ್ಯೆ ಅನುಭವಿಸುವ ವ್ಯಕ್ತಿಗಳು ಅದಕ್ಕೆ ಶಾಶ್ವತ ಪರಿಹಾರ ಹುಡುಕಬಲ್ಲರು. ನೀರಿನ ಸಮಸ್ಯೆ ಇರುವ ಪ್ರದೇಶದ ವ್ಯಕ್ತಿಯನ್ನೇ ನಾನು ಈ ಖಾತೆಗೆ ಸಚಿವರನ್ನಾಗಿ ಮಾಡಿದ್ದೇನೆ’ ಎಂದು ಹೇಳಿದರು.