ಧೀ ಶಕ್ತಿ ಜ್ಞಾನ ಯೋಗ ವತಿಯಿಂದ ಧ್ಯಾನ ಶಿಬಿರ ಉದ್ಘಾಟನೆ

ಮಂಗಳೂರು, ಸೆ.೨೫- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್ ಸಹಭಾಗಿತ್ವದಲ್ಲಿ ಧೀ ಶಕ್ತಿ ಜ್ಞಾನ ಯೋಗದ ವತಿಯಿಂದ ಧ್ಯಾನ ಶಿಬಿರದ ಉದ್ಘಾಟನಾ ಸಮಾರಂಭ ಮಂಗಳೂರಿನ ಉರ್ವದಲ್ಲಿರುವ ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಿತು.

ಸೆಪ್ಟೆಂಬರ್ ೨೪ ರಿಂದ ಅಕ್ಟೋಬರ್ ೩ರವರೆಗೆ ನಡೆಯಲಿರುವ ಧ್ಯಾನ ಶಿಬಿರವನ್ನು ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೊಟೇರಿಯನ್ ರವೀಂದ್ರ ಭಟ್ ಮತ್ತು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್‌ನ ಅಧ್ಯಕ್ಷ ಸದಾನಂದ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೊಟೇರಿಯನ್ ರವೀಂದ್ರ ಭಟ್ ಮಾತನಾಡಿ, “ಯೋಗ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಯೋಗ ಬೇಕು. ಆ ಯೋಗ ನನಗೆ ದೊರಕಿದೆ. ಯೋಗ ಮಾಡಿದವನಿಗೆ ರೋಗ ಇರುವುದಿಲ್ಲ ಯೋಗ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಆದ್ದರಿಂದ ಯುವ ಜನತೆಗೆ ಯೋಗದ ಮಹತ್ವವನ್ನು ತಿಳಿಸುವ ಅವಶ್ಯಕತೆ ಇದೆ” ಎಂದು ಹೇಳಿದರು.

ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್‌ನ ಅಧ್ಯಕ್ಷ ಸದಾನಂದ ಶೆಟ್ಟಿ ಮಾತನಾಡಿ, “ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಸಂತೊಷವಾಗುತ್ತಿದೆ. ಇಂದು ಉದ್ಘಾಟನೆಗೊಂಡು ಮುಂದಿನ ಕೆಲವು ದಿನಗಳ ಕಾಲ ನಡೆಯಲಿರುವ ಯೋಗ ಶಿಬಿರದಲ್ಲಿ ಭಾಗವಹಿಸಿ ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್ ಸಾರ್ ಮಾತನಾಡಿ, “ನಮ್ಮ ದೇಶ ವಿಶ್ವಗುರುವಾಗಿದೆ. ನಮ್ಮ ದೇಶದ ಯೋಗ, ಧ್ಯಾನ, ಪ್ರಾಣಾಯಾಮವನ್ನು ಎಲ್ಲಾ ದೇಶದವರು ಅನುಸರಿಸುತ್ತಿದ್ದಾರೆ. ಆದರೆ ನಾವು ಎಷ್ಟು ಇದನ್ನು ಉಳಿಸಿಕೊಂಡು ಬರುತ್ತಿದ್ದೇವೆ ಎನ್ನುವುದನ್ನು ಯೋಚನೆ ಮಾಡಬೇಕು” ಎಂದು ಹೇಳಿದರು.

ಈ ಸಂದರ್ಭದ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ರಾಮಶೇಷ ಶೆಟ್ಟಿ, ಸಹಾಯಕ ರಾಜ್ಯಪಾಲ ರಾಘವೇಂದ್ರ ರಾವ್, ರೋಟರಿ ಮಾಜಿ ಗವರ್ನರ್ ಡಾ.ದೇವದಾಸ್ ರೈ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿ ಚರಣ್ ಶೆಟ್ಟಿ, ತುಳು ಅಕಾಡೆಮಿ ಸದಸ್ಯ ಶಶಿಧರ್ ಶೆಟ್ಟಿ ನಿಟ್ಟೆ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಧ್ಯಾನ ಶಿಬಿರದ ಸಂಚಾಲಕ ರಾಜ್ ಗೋಪಾಲ್ ರೈ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ವಂದಿಸಿದರು.