ಧೀರೋದ್ದಾತ ಶರಣ ಅಂಬಿಗರ ಚೌಡಯ್ಯ

ಕಲಬುರಗಿ:ಶರಣವೃತ್ತಿ ಯಾವುದೇ ಇದ್ದರೂ ಅದನ್ನು ಮೆಚ್ಚಿಕೊಳ್ಳುವಂತಹ ಒಪ್ಪಿಕೊಳ್ಳುವಂತಹ ಅಭಿಮಾನ ಪಡುವಂತಹ ವ್ಯಕ್ತಿತ್ವವುಳ್ಳವರಾಗಿದ್ದರು. ಹುಟ್ಟು ಸಾವುಗಳೆಂಬ ಜೀವನದ ನದಿಯನ್ನು ಕೂಡಾ ದಾಟಿಸುವಂತಹ ದಾರ್ಶನಿಕ ವಚನಕಾರರಾಗಿದ್ದರು.

ಕಲಬುರಗಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ರವಿವಾರ ದಂದು ಲಿಂ. ರುದ್ರಪ್ಪ ಬೆನಕನಳ್ಳಿ ರಟಕಲ್, ಲಿಂ. ಸುಭಾಶ್ಚಂದ್ರ ರುದ್ರಪ್ಪ ಬೆನಕನಳ್ಳಿ ರಟಕಲ್ ಮತ್ತು ಲಿಂ. ರೇವಣಪ್ಪ ಸಂಗಪ್ಪ ಮೀಸೆ, ಲಿಂ. ಡಾ. ಅನಿಲ ರೇವಣಪ್ಪ ಮೀಸೆ ಸ್ಮರಣಾರ್ಥ ಆನ್‍ಲೈನ್ ಅರಿವಿನ ಮನೆ 636 ನೆಯ ದತ್ತಿ ಕಾರ್ಯಕ್ರಮದಲ್ಲಿ ‘ನಿಜಶರಣ ಅಂಬಿಗರ ಚೌಡಯ್ಯ’ ಎಂಬ ವಿಷಯದ ಮೇಲೆ ಮಾತನಾಡಿದ ಕನ್ನಡ ಪ್ರಾಧ್ಯಾಪಕರಾದ ಡಾ. ಚಿತ್ಕಳಾ ಮಠಪತಿಯವರು ವೃತ್ತಿಯನ್ನು ಶರಣರು ಉದರಪೋಷಣೆಂದು ಕೈ ಕೊಂಡಿದ್ದರೂ ಕೂಡಾ ಅದರ ನೆಲೆಯಲ್ಲಿದ್ದುಕೊಂಡು ಮಹಾನುಭಾವಿಗಳಾದದ್ದು ವಿಶೇಷವೆನ್ನಬಹುದು. ಅಂಬಿಗರ ಚೌಡಯ್ಯನವರು ತಮ್ಮ ವೃತ್ತಿಯ ವೈಶಿಷ್ಟ್ಯಗಳನ್ನು ತಮ್ಮ ವಚನಗಳಲ್ಲಿ ಅದು ಬದುಕಿಗೂ ಹಾಗೂ ವೃತ್ತಿಗೂ ಅನ್ವಯವಾಗುವಂತೆ ಬರೆದಿದ್ದಾರೆ. ಚಂದಗೆಟ್ಟವರೆಲ್ಲಾ ಬಂದು ಏರಿ ನನ್ನ ದೋಣಿ ಶಿವನ ನೆಲೆ ಕಾಣಿಸುವೆ ಎಂದು ಹೇಳುತ್ತಾ ಬದುಕಿನ ಬವಣೆಗಳ ಮಧ್ಯೆ ಸಿಲುಕಿಕೊಂಡವರನ್ನೂ ಆನುಭಾವಿಕ ನೆಲೆಗೆ ಕೊಂಡೊಯ್ಯವ ಮಾತುಗಳನ್ನಾಡಿದ್ದಾರೆ. ದೋಣಿಯನ್ನೇರಿದವರು ತನಗೆ ಕೊಡಬೇಕಾದ ಉದರಪೋಷಣೆಯ ದುಡ್ಡಿಗೂ ಸಹ ಹಿಡಿದ ಬಿಡುವ ಮನವನ್ನು ನನಗೆ ಕೊಡಿರೆÀಂದು ಹೇಳುತ್ತಾರೆ. ಮನದ ಚಾಂಚಲ್ಯವನ್ನು ಕಳೆದು ಜೀವನದ ಸಾರ್ಥಕತೆಯನ್ನು ಕಾಣುವತ್ತ ಪಯಣಿಗರನ್ನು ಒಯ್ಯುವ ಮಹದಾಸೆಯನ್ನು ತಮ್ಮ ವಚನಗಳಲ್ಲಿ ವ್ಯಕ್ತಿಪಡಿಸುತ್ತಾರೆ.

ಅಂಬಿಗರ ಚೌಡಯ್ಯನವರ ವಚನಗಳಲ್ಲಿ ರೊಟ್ಟಿ,ಹೊಟ್ಟಿ ಉದರನ್ನ ಮುಟಿಗಿ, ಸೀತನಿ ಮುಂತಾದ ಪದಗಳು ಬರುವುದನ್ನು ನೋಡಿದರೆ ಅವರು ಉತ್ತರ ಕರ್ನಾಟಕ ಭಾಗದವರೆಂಬುದು ಖಚಿತವಾಗುತ್ತದೆ. ಈ ಬಗ್ಗೆ ಅನೇಕ ಸಂಶೋಧಕರೂ ಸಹಮತ ವ್ಯಕ್ತ ಪಡಿಸುತ್ತಾರೆ. ಕಲ್ಯಾಣದ ತ್ರಿಪುರಾಂತಕ ಕೆರೆಯಲ್ಲಿ ತನ್ನ ಕಾಯಕವನ್ನು ಕೈಗೊಂಡಿದ್ದರ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ಪ್ರಕಟಿಸಿದ ವಚನ ಸಂಕಲನದಲ್ಲಿ ಚೌಡಯ್ಯನವರ 279 ವಚನಗಳನ್ನು ಕಾಣಬಹುದು ಬೇರೆ ಬೇರೆ ಕಡೆ ಪ್ರಕಟಗೋಂಡ 300 ವಚನಗಳನ್ನು ನಾವು ಗುರುತಿಸಬಹುದು.

ತಮ್ಮ ಹೆಸರನ್ನೇ ವಚನಾಂಕಿತವನ್ನಾಗಿಸಿಕೊಂಡ ಏಕೈಕ ಧೀರೋದ್ದಾತ ವ್ಯಕ್ತಿತ್ವದ ಶರಣನೆಂದರೆ ಅದು ಅಂಬಿಗರ ಚೌಡಯ್ಯ ಮಾತ್ರ. ಅವರ ವಚನಗಳಲ್ಲಿ ನಿಷ್ಠುರÀ, ನಿರ್ಭಿಡೆಯ ನುಡಿಗಳನ್ನು ನಾವು ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದಾಗಿದೆ. ಕಟ್ಟಿದ ಲಿಂಗವ ಬಿಟ್ಟು. ಬೆಟ್ಟದಲಿಂಗಕ್ಕೆ ಹೋಗಿ, ಹೊಟ್ಟೆಯಡಿಯಾಗಿ ಬೀಳುವ ಲೊಟ್ಟಿ ಮೂಳರ ಕಂಡರೆ ಮೆಟ್ಟಿದ ಎಡಪಾದÀರಕ್ಷೆಯ ಕೊಂಡು ಲೊಟ ಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ ಎಂದು ಹೇಳುತ್ತಾ ಮೌಢ್ಯತೆಯ ವಿರುದ್ಧ ಮುಲಾಜಿಲ್ಲದೆ ಗುಡುಗಿದ್ದನ್ನು ನಾವು ಕಾಣಬಹುದಾಗಿದೆ.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಡಾ. ಬಿ. ಡಿ ಜತ್ತಿ ವಚನ ಅಧ್ಯಯ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ ಹಾಗೂ ದತ್ತಿ ದಾಸೋಹಿಗಳಾದ ಶ್ರೀ ಶೀಲಾ ಕೋಣಿನ ಮತ್ತು ಡಾ. ಶಶಿಕಾಂತ ಆರ್. ಮೀಸೆ ಉಪಸ್ಥಿತರಿದ್ದರು. ಶ್ರೀ ಹೆಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.