ಧಾರ್ಮಿಕ ಶಾಲೆಯಿಂದ 136 ವಿದ್ಯಾರ್ಥಿಗಳ ಅಪಹರಣ

ಅಬುಜ (ನೈಜೀರಿಯ), ಜೂ.4- ಕಳೆದ ವಾರಾಂತ್ಯದಲ್ಲಿ ಮಧ್ಯ ನೈಜೀರಿಯದ ಧಾರ್ಮಿಕ ಶಾಲೆಯೊಂದರಿಂದ ಬಂದೂಕುಧಾರಿಗಳು 136 ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ ಎಂದು ಅಲ್ಲಿನ ರಾಜ್ಯ ಸರಕಾರ ತಿಳಿಸಿದೆ. ಇದು ಆಫ್ರಿಕ ಖಂಡದ ಅತ್ಯಂತ ಜನಭರಿತ ದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಅಪಹರಣಕ್ಕೆ ಹೊಸ ಸೇರ್ಪಡೆಯಾಗಿದೆ.

ಟೆಗಿನ ಪಟ್ಟಣದಲ್ಲಿರುವ ಶಾಲೆಯ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿರುವುದಾಗಿ ನೈಜರ್ ರಾಜ್ಯದ ಸರಕಾರ ಸೋಮವಾರವೇ ವರದಿ ಮಾಡಿತ್ತು. ಆದರೆ ಎಷ್ಟು ವಿದ್ಯಾರ್ಥಿಗಳನ್ನು ಅಪಹರಿಸಲಾಗಿದೆ ಎಂಬ ಮಾಹಿತಿಯನ್ನು ಅದು ನೀಡಿರಲಿಲ್ಲ. ವಾಯುವ್ಯ ಮತ್ತು ಮಧ್ಯ ನೈಜೀರಿಯದಲ್ಲಿ ಶಸ್ತ್ರಸಜ್ಜಿತ ಗುಂಪುಗಳು ಪುಂಡಾಟ ನಡೆಸಿ ಜನರನ್ನು ಬೆದರಿಸುತ್ತಿವೆ. ಅವುಗಳು ಗ್ರಾಮಗಳನ್ನು ದೋಚುತ್ತಿವೆ, ಆಕಳುಗಳನ್ನು ಕದಿಯುತ್ತಿವೆ ಮತ್ತು ಜನರನ್ನು ಒತ್ತೆಸೆರೆಯಲ್ಲಿ ಇಡುತ್ತಿವೆ. ಡಿಸೆಂಬರ್ ಬಳಿಕ ಶಸ್ತ್ರಸಜ್ಜಿತ ಗುಂಪುಗಳು 700ಕ್ಕೂ ಅಧಿಕ ಮಕ್ಕಳು ಮತ್ತು ವಿದ್ಯಾರ್ಥಿಗಳನ್ನು ಅಪಹರಿಸಿವೆ. ‘‘ಟೆಗಿನ ಪಟ್ಟಣದಲ್ಲಿರುವ ಧಾರ್ಮಿಕ ಶಾಲೆಯಿಂದ ದರೋಡೆಕೋರರು ಅಪಹರಿಸಿರುವ ಮಕ್ಕಳ ಸಂಖ್ಯೆ 136 ಎಂಬುದಾಗಿ ನೈಜರ್ ರಾಜ್ಯ ಸರಕಾರ ತಿಳಿಸಿದೆ’’ ಎಂದು ಸರಕಾರದ ವಕ್ತಾರರೊಬ್ಬರು ಬುಧವಾರ ರಾತ್ರಿ ಟ್ವೀಟ್ ಮಾಡಿದ್ದಾರೆ. ಅದೇ ವೇಳೆ, ಹೆಚ್ಚು ದೂರ ನಡೆಯಲು ಸಾಧ್ಯವಾಗದ ತುಂಬಾ ಸಣ್ಣ 11 ಮಕ್ಕಳನ್ನು ದರೋಡೆಕೋರರು ಬಿಡುಗಡೆ ಮಾಡಿದ್ದಾರೆ ಎಂಬುದಾಗಿ ಅಧಿಕಾರಿಗಳು ಈಗಾಗಲೇ ಹೇಳಿದ್ದಾರೆ.