ಧಾರ್ಮಿಕ ರಾಯಭಾರಿ ಉಜ್ಜಯಿನಿ ಪೀಠ


ವಿಜಯನಗರ ಜಿಲ್ಲೆಗೆ ಹಂಪಿ ಸಾಂಸ್ಕೃತಿಕ ರಾಯಭಾರಿಯಾದರೆ ಉಜ್ಜಯಿನಿ ಪೀಠ ಧಾರ್ಮಿಕ ರಾಯಭಾರಿ.ಜಾನಪದರ ಬಾಯಿಂದ ಹಿಡಿದು ಈಗಿನ ದಿನಮಾನಗಳಲ್ಲು ಅಚ್ಚಳಿಯದೇ ಉಳಿದಿರುವ ಒಂದು ಮಾತಿದೆ.
“ಅದೇ ಹಂಪೆ ಹೊರಗೆ ನೋಡು, ಉಜ್ಜಯಿನಿ ಒಳ ನೋಡು” ಎಂದೇ ಈ ಗಾದೆಯ ವಿಸ್ತ್ರತ ರೂಪ ಇಷ್ಟೆ. ಹಂಪಿ ಹೊರ ಜಗತ್ತಿಗೆ ಸಾಂಸ್ಕೃತಿಕ ಕೇಂದ್ರ ಸ್ಥಾನವಾಗಿ ವಿಶ್ವ ವಿಖ್ಯಾತಿಯನ್ನು ಪಡೆದಿದೆ. ಅದೇ ಪ್ರಕಾರ ಉಜ್ಜಯಿನಿ ತನ್ನ ಧಾರ್ಮಿಕ ಶಕ್ತಿಯನ್ನು ತೋರಿಸುವ ಮೂಲಕ ತನ್ನದೇ ಆದ ಧರ್ಮದ ಸಾರವನ್ನು ಜಗತ್ತಿಗೆ ತೋರಿಸಿದೆ. ಹಂಪೆಯಲ್ಲಿ ನೋಡುವ ಮನೋಜ್ಞ ಶಿಲ್ಪ ಕಲೆಗಳೆಲ್ಲವೂ ಉಜ್ಜಯಿನಿಯ ಪೀಠದಲ್ಲಿ ಎಳೆ ಎಳೆಯಾಗಿ ವಿವರಿಸಲ್ಪಡುತ್ತವೆ. ಏಕೆಂದರೆ ಇದೊಂದು ಶಕ್ತಿಪೀಠ ಅಲ್ಲಿ ಕಲ್ಲಿನಲ್ಲಿ ಚಿತ್ರತವಾದರೆ ಉಜ್ಜಯಿನಿ ಪೀಠದಲ್ಲಿ ಧಾರ್ಮಿಕ ಶಕ್ತಿಯಾಗಿ ಬಿಂಬಿಸಿಕೊಂಡಿದೆ. ಇಲ್ಲಿ ನಡೆಯುವ ಪ್ರತಿಯೊಂದು ಆಚರಣೆಗಳಿಗೂ ತನ್ನದೇ ಆದ ವೈಶಿಷ್ಟವಿದೆ. ಈ ವೈಶಿಷ್ಟಗಳೆಂದರೆ ಉಜ್ಜಯಿನಿ ಪೀಠ ದೇಶದುದ್ದಗಲಕ್ಕೂ ೨೦೦೦ ಕ್ಕೂ ಅಧಿಕ ಶಾಖಾ ಮಠಗಳನ್ನು ಹೊಂದಿ ತಮ್ಮದೇ ಆದ ಧಾರ್ಮಿಕ ಪ್ರಜ್ಞೆಯನ್ನು ಹಾಗು ಚಿಂತನೆಯನ್ನು ಭಕ್ತರಲ್ಲಿ ನೆಲೆಗೊಳಿಸುತ್ತಾ ಬಂದಿದೆ. ಸನಾತನ ಧರ್ಮ ಪೀಠಗಳಲ್ಲಿ ಒಂದಾದ ಶ್ರೀ ಜಗದ್ಗುರು ಮರುಳಸಿದ್ಧೇಶ್ವರರ ಈ ಪೀಠ ಕ್ರಿ.ಶ. ೬ ನೇ ಶತಮಾನದ ಅಂತ್ಯದಲ್ಲಿ ಉಜ್ಜಯಿನಿ ಕ್ಷೇತ್ರದಲ್ಲಿ ನೆಲೆಗೊಂಡಿತ್ತೆಂಬುದನ್ನು ತಿಳಿಯಬಹುದು. ಇದು “ಸದ್ಧರ್ಮ” ಪೀಠ ಇಲ್ಲಿ ಜಾತಿಯ ಹಂಗಿಲ್ಲ, ಸರ್ವಧರ್ಮಿಯರೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಭಕ್ತರೆ, ಜಾತಿಯ ಕಟ್ಟು ಪಾಡುಗಳನ್ನು ನಾಚಿಸುವಂತಹ ಧರ್ಮದಲ್ಲಿ ಸಮಾನತೆಯನ್ನು ಎತ್ತಿ ತೋರಿಸುವಂತಹ ಶ್ರೀ ಪೀಠ ಸರ್ವರಲ್ಲೂ ಏಕತೆಯನ್ನು ಸಾರುತ್ತಾ ಬಂದಿದೆ. ಶ್ರೀಮದ್ ವೀರಶೈವ ಪಂಚ ಪೀಠಗಳಲ್ಲಿ ಎರಡನೇ ಅತೀ ಮುಖ್ಯ ಸ್ಥಾನವನ್ನು ಅಲಂಕರಿಸಿ ಜನತೆಗೆ ಧರ್ಮದ ಸೆಲೆಯನ್ನು ನೆಲೆಯೂರುವಂತೆ ಮಾಡುವ ಮೂಲಕ ಕೊಟ್ಯಾಂತರ ಭಕ್ತರನ್ನು ಶ್ರೀ ಪೀಠ ಹೊಂದಿದೆ.
ಪ್ರಸ್ತುತ ಶ್ರೀಪೀಠದ ೧೧೨ ನೇ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರನ್ನು ಮೊದಲ್ಗೊಂಡು ೧೧೧ ನೇ ಜಗದ್ಗುರುವರ್ಯರು ಪೀಠವನ್ನು ಆರೋಹಣ ಮಾಡಿ, ಧರ್ಮ ಜಾಗೃತಿಯನ್ನು ಮಾಡಿರುವಂತಹರನ್ನು ಇತಿಹಾಸದಿಂದ ತಿಳಿಯಬಹುದಾಗಿದೆ. ಯುಗ ಯುಗಗಳಲ್ಲೂ ಶ್ರೀ ಪೀಠ ತನ್ನ ಧರ್ಮ ಕ್ರಾಂತಿಯನ್ನು ಮಾಡುತ್ತಾ ಬಂದಿದ್ದು. ಪ್ರಸ್ತುತ ಜಗದ್ಗುರುಗಳವರೆಗೂ ಇದು ಮುಂದುವರೆದಿದೆ. ಶ್ರೀಪೀಠ ಕೇವಲ ಧಾರ್ಮಿಕ ಪರಂಪರೆಯನ್ನು ಮಾತ್ರ ಮಾಡದೇ, ಸಾಮಾಜಿಕ ನ್ಯಾಯವನ್ನು ಒದಗಿಸುವ ದೃಷ್ಠಿಯಿಂದ ಶ್ರೀ ಪೀಠದಲ್ಲಿ “ಸದ್ಧರ್ಮ ನ್ಯಾಯ ಪೀಠ” ವನ್ನು ಸ್ಥಾಪಿಸಿ ಇದರ ಮುಖಾಂತರ ಅನೇಕ ತಂಟೆ – ತಕರಾರುಗಳನ್ನು ಧರ್ಮಸ್ಥಾನದಲ್ಲಿದ್ದುಕೊಂಡು ಬಗೆಹರಿಸಿದಂತಹ ಅನೇಕ ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಹಂಪೆಯಲ್ಲಿ ರಾಜರು ನ್ಯಾಯನಿರ್ಣಯ ನೀಡಿದರೆ, ಇಲ್ಲಿ ಗುರುಗಳು ನ್ಯಾಯ ನಿರ್ಣಯ ನೀಡಿರುವುದನ್ನು ಸ್ಮರಿಸಬಹುದಾಗಿದೆ. ಅದೇ ರೀತಿ ಇಲ್ಲಿ ನಡೆಯುವ “ಭರತ ಹುಣ್ಣಿಮೆ ಯುಗಮಾನೋತ್ಸವ” ನೋಡುಗರ ಕಣ್ಣಿಗೆ ಹಬ್ಬ, ಆಚರಿಸುವ ಭಕ್ತರಿಗೆ ಅದು ಸಡಗರ, ಅದೇ ರೀತಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಅದು ದಂಡೆಯಾತ್ರೆಯಂತೆ, ಕೈಗೊಂಡರೆ, ಜಗದ್ಗುರು ಮರುಳಸಿದ್ದೇಶ್ವರರು  ಧರ್ಮದ ದಂಡ ಹಿಡಿದು, ಜಾಗೃತಿಯ ಯಾತ್ರೆಯನ್ನು ನಡೆಸುವ ಮೂಲಕ ಜನರಲ್ಲಿ ಈ ಧಾರ್ಮಿಕ ನಂಬಿಕೆಯನ್ನು ನೆಲೆಗೊಳಿಸುತ್ತಾ ಬಂದಿರುವುದನ್ನು ನೋಡಿದಾಗ ನಿಜಕ್ಕೂ ಅದೊಂದು ಶಕ್ತಿಪೀಠ ಎನ್ನಿಸುವಲ್ಲಿ ಯಾವುದೇ ಸಂಶಯಗಳಿಲ್ಲ. ಹಾಗೆ ಅರಮನೆಗಳಲ್ಲಿ ನಾವು ಸಹಜವಾಗಿ ಅತಿಥಿ ನಿಲಯಗಳನ್ನು, ರಾಯಭಾರ ಕಛೇರಿಗಳನ್ನು ಕಾಣಬಹುದು, ಹಾಗೆಯೇ ಶ್ರೀಪೀಠದಲ್ಲಿರುವ “ಪಂಚಾಚಾರ್ಯರ ಶಿಲಾ ಮಂಟಪ” ಜಗದ್ಗುರು ಪಂಚಪೀಠಾಧೀಶ್ವರರು ಒಂದೇ ವೇದಿಕೆಯಲ್ಲಿ ಆಸೀನರಾಗಲು ಹಾಗು ಸಭೆ ನಡೆಸಲು, ಧರ್ಮ ಸಂದೇಶ ಸಾರಲು ಮಾಡಿರುವ ಖಾಯಂ ವೇದಿಕೆಯಾಗಿ ಶ್ರೀಪೀಠದಲ್ಲಿ  ಕಂಗೊಳಿಸುತ್ತಿರುವುದನ್ನು ನೋಡಿದಾಗ ಇಲ್ಲಿ  ನಡೆಯಬಹುದಾದ ಧಾರ್ಮಿಕ ಚಟುವಟಿಕೆಗಳು ಎಷ್ಟಿತ್ತು ಎಂಬುದನ್ನು ಯೋಚಿಸಬಹುದಾಗಿದೆ. ಹಾಗೆಯೇ ಇಲ್ಲಿರುವ ದೇವಸ್ಥಾನದ ವಾಸ್ತು ಶಿಲ್ಪಗಳು ಅಮರ ಶಿಲ್ಪಿ ಜಕಣಾಚಾರಿಯವರಿಂದ ಕೆತ್ತನೆಮಾಡಲಾಗಿದೆ. ಎಂಬುದಾಗಿಯೂ ಹಾಗೂ ಅಲ್ಲಿರುವ ಸೂಕ್ಷ್ಮ, ಅತಿಸೂಕ್ಷ್ಮ ಕೆತ್ತನೆಯಾದ “ಸಹಸ್ರ ದಳ ಕಮಲ” ವು ವಾಸ್ತು ಶಿಲ್ಪಕ್ಕೆ ಹಿಡಿದ ಕನ್ನಡಿಯಾಗಿದೆ. ಹಾಗೆಯೇ ಮೊದಲೇ ತಿಳಿಸಿದಂತೆ – ಇಲ್ಲಿ ಕಂಡುಬರುವ ವೇಣುಗೋಪಾಲಸ್ವಾಮಿ, ವೀರಭದ್ರಸ್ವಾಮಿ, ಅಂಕಾಳೆ ಬಸವಣ್ಣ, ಪ್ರವೇಶ ದ್ವಾರದಲ್ಲಿ – ಗಜಲಕ್ಷ್ಮಿ ಸ್ತೂಪ ಇವೆಲ್ಲದಕ್ಕಿಂತ ವೈಶಿಷ್ಟ್ಯವೆಂದರೆ, ಸಹಜವಾಗಿ – ಗರ್ಭಗುಡಿಯ ಗೋಪುರವನ್ನು ದೇವಸ್ಥಾನದ – ಮೇಲ್ಚಾವಣೆಯ ಮೇಲಿನಿಂದ ಕಟ್ಟಿರುವುದನ್ನು ಕಾಣಬಹುದು. ಆದರೆ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಗೋಪುರವು ಸಂಪೂರ್ಣ ಕೆಳಭಾಗದಿಂದಲೇ – ಶಿಖರದವರೆಗೆ ಇದ್ದು. ಈ ವೈಶಿಷ್ಟ್ಯಪೂರ್ಣ ಶಿಖರಕ್ಕೆ ಪ್ರತಿ ವರ್ಷ ನಡೆಯುವ “ಶಿಖರ ತೈಲಾಭಿಷೇಕ” ಎಲ್ಲದಕ್ಕಿಂತ  ವೈಶಿಷ್ಟ್ಯವಾದದ್ದು. ಪ್ರತಿ ವರ್ಷ ಕೂಡ್ಲಿಗಿ ತಾಲೂಕಿನ ಜರ್ಮಲಿಯ ಪಾಳೆಗಾರರು ತಮ್ಮ ಶಾಪ ವಿಮುಕ್ತಿಗಾಗಿ ಜರ್ಮಲಿಯಿಂದ ಪಾದಯಾತ್ರೆ ಮೂಲಕ ಆಗಮಿಸಿ ತಾವು ತಂದಿರುವ ತೈಲವನ್ನು ಶಿಖರಕ್ಕೆ ಅಭಿಷೇಕ ಮಾಡುವುದು ವಾಡಿಕೆ. ಪ್ರತಿ ವರ್ಷವು ಸ್ವಾಮಿಯ ರಥೋತ್ಸವವು – ಅತ್ಯಂತ ವಿಜೃಂಭಣೆಯಿAದ ನಡೆದುಕೊಂಡು ಬಂದಿರುವುದು ನಮಗೆಲ್ಲಾ ತಿಳಿದ ವಿಷಯ. ಹೀಗೆ ಹತ್ತು ಹಲವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗು ವಾಸ್ತುಶಿಲ್ಪ ಕಲೆಯನ್ನು ಹೊಂದಿರುವ ಉಜ್ಜಯಿನಿ ಪೀಠ ಹಂಪೆಯನ್ನು ಹೋಲುವ ಗುಣಗಳನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇನ್ನೊಂದು ವಿಶೇಷವೆಂದರೆ ತೇರುಗಾಲಿಯನ್ನು ಹೊರಗೆ ಹಾಕಿದ ದಿನ ಶ್ರೀಸ್ವಾಮಿಯು ತೇರುಗಾಲಿಯ ಸ್ಥಾನಕ್ಕೆ ಹೋಗಿ ಚಿಕ್ಕ ಕಟ್ಟಿಗೆಯನ್ನು ನೀಡುವ ಮೂಲಕ ತೇರು ಕಟ್ಟಲು ಅಪ್ಪಣೆಯನ್ನು ನೀಡಿ ಬರುವುದು ಹಾಗೂ ರಥೋತ್ಸವ ಮುಗಿದ ನಂತರದ ದಿನ ಮತ್ತೆ ಅದೇ ಸ್ಥಾನಕ್ಕೆ ಹೋಗಿ ತೇರು ಬಿಚ್ಚಲು ಅಪ್ಪಣೆ ನೀಡುವುದು ಕೂಡ ಇಲ್ಲಿನ ವಿಶೇಷ. ಅಂದರೆ ಪ್ರತಿ ಹಂತದಲ್ಲೂ ನಾನಿದ್ದೇನೆ ಯಾವುದಕ್ಕೂ ಹಿಂಜರಿಯದೆ ಧರ್ಮ ಕಾರ್ಯದಲ್ಲಿ ಮುನ್ನುಗ್ಗಿ ಎನ್ನುವ ಶುಭ ಸಂದೇಶ ಸಾರುವ ಶ್ರೀ ಜಗದ್ಗುರು ಮರುಳಸಿದ್ದೇಶ್ವರರು ಸದಾವಕಾಲ ಭಕ್ತರಿಗೆ ಅಭಯವನ್ನು ನೀಡಿ ಕಾಪಾಡುವ ಕಾಮಧೇನುವಾಗಿದ್ದಾರೆ.

ಮಠದ ಮಲ್ಲಿಕಾರ್ಜುನಯ್ಯ, ಕಾರ್ಯದರ್ಶಿಗಳು ಶ್ರೀ ಜಗದ್ಗುರು ದಾರುಕಾಚಾರ್ಯ ಶಿಕ್ಷಣ ಸಂಸ್ಥೆ ಕೊಟ್ಟೂರು.