ಧಾರ್ಮಿಕ ಮೂಲಭೂತವಾದಿಗಳನ್ನು ವಿರೋಧಿಸಿ ರಾಷ್ಟ್ರ ಮುನ್ನಡೆಸುವ ಹೊಣೆ ಯುವ ಜನಾಂಗದ ಮೇಲಿದೆ: ಡಾ. ಬರಗೂರು

ಕಲಬುರಗಿ:ನ.27: ಧಾರ್ಮಿಕ ಮೂಲಭೂತವಾದಿಗಳನ್ನು ವಿರೋಧಿಸಿ ಪ್ರಜಾಸತ್ತಾತ್ಮಕ ರಾಷ್ಟ್ರವನ್ನು ಮುನ್ನಡೆಸುವ ಹೊಣೆ ಯುವ ಜನಾಂಗದ ಮೇಲಿದೆ ಎಂದು ಹಿರಿಯ ಸಾಹಿತಿ ನಾಡೋಜ್ ಡಾ. ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.
ನಗರದ ಜೇವರ್ಗಿ ರಸ್ತೆಯಲ್ಲಿರುವ ಶಮ್ಸ್ ಫಂಕ್ಷನ್ ಹಾಲ್‍ನಲ್ಲಿ ಶನಿವಾರ ಆರಂಭಗೊಂಡ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಸಂಘಟನೆಯ ರಾಜ್ಯ ಮಟ್ಟದ ಐದನೇ ಯುವ ಸಮ್ಮೇಳನವನ್ನು ಕೆಂಪು ಬಾವುಟವನ್ನು ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮರ ವಿಚಾರಗಳು ಯುವಕರಿಗೆ ಆದರ್ಶ ಆಗಿರಬೇಕೇ ಹೊರತು ಮೂಲಭೂತವಾದಿಗಳ ವಿಚಾರಗಳು ಎಂದಿಗೂ ಆದರ್ಶಗಳಾಗಬಾರದು ಎಂದರು.
ಎಲ್ಲ ಧರ್ಮಗಳಲ್ಲಿಯೂ ಸಹ ಒಳ್ಳೆಯವರು ಹಾಗೂ ಕೆಟ್ಟವರೂ ಇದ್ದೇ ಇರುತ್ತಾರೆ. ಕೆಟ್ಟದ್ದನ್ನು ವಿರೋಧಿಸಬೇಕು. ಒಳ್ಳೆಯದನ್ನು ಸ್ವೀಕರಿಸಬೇಕು. ಇಸ್ಲಾಂ ಧರ್ಮದಲ್ಲಿ ಮೊಹ್ಮದ್ ಪೈಗಂಬರ್ ಅವರ ಆದರ್ಶಗಳನ್ನು ಪಾಲಿಸಬೇಕು. ಅದೇ ಭಯೋತ್ಪಾದ ಬಿನ್ ಲಾಡೆನ್‍ನಿಗೆ ವಿರೋಧಿಸಬೇಕು ಎಂದು ಅವರು ಸಲಹೆ ಮಾಡಿದರು.
ಅದೇ ರೀತಿ ಹಿಂದೂ ಧರ್ಮದಲ್ಲಿ ನಾಥೂರಾಮ್ ಗೋಡ್ಸೆ ಎಂದಿಗೂ ಆದರ್ಶವಾಗಬಾರದು. ಬದಲಿಗೆ ಸತ್ಯ, ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರು ಆದರ್ಶರಾಗಬೇಕು ಎಂದು ಅವರು ಹೇಳಿದರು.
ಮಹಾತ್ಮಾಗಾಂಧೀಜಿ ಅವರು ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟವು ಜಾತ್ಯಾತೀತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿತ್ತು. ಯಾವುದೇ ಒಂದು ಧರ್ಮವನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲಿಲ್ಲ. ಬದಲಾಗಿ ಚರಕ, ಖಾದಿ, ಉಪ್ಪು ಮುಂತಾದ ಜನಸಾಮಾನ್ಯರ ಬಳಕೆಯ ವಸ್ತುಗಳ ಮೂಲಕ ಹೋರಾಟ ಮಾಡಿದರು. ಗಾಂಧೀಜಿಯವರಿಗೆ ಶ್ರೀರಾಮ ಆದರ್ಶವಾಗಿದ್ದರು. ಗಾಂಧೀಜಿ ಅವರಂತಹ ಶ್ರೀರಾಮ ಭಕ್ತರು ಬೇರೆ ಯಾರೂ ಇಲ್ಲ ಎಂದು ಅವರು ತಿಳಿಸಿದರು.
ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದವರು. ಆದಾಗ್ಯೂ, ಅವರ ವಿಚಾರಗಳು ಕೇವಲ ಒಂದೇ ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಇಡೀ ಮನುಕುಲದ ಉದ್ಧಾರವನ್ನು ಅವರು ಬಯಸಿದರು. ಹಸಿವು ಹಿಂಗಿಸಲು ಕರೆ ನೀಡಿದರು. ಹೀಗಾಗಿ ಸ್ವಾಮಿ ವಿವೇಕಾನಂದರು ಇಡೀ ಮನುಕುಲಕ್ಕೆ ಸೇರಿದವರು. ಅವರ ಆದರ್ಶಗಳನ್ನು ಯುವಕರು ಪಾಲಿಸಬೇಕು ಎಂದು ಅವರು ಹೇಳಿದರು.
ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂವಾಗಿ ಹುಟ್ಟಿದ್ದೇನೆ. ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳುವ ಮೂಲಕ ಹಿಂದೂ ಧರ್ಮವನ್ನು ವಿರೋಧಿಸಿ, ಬೌದ್ಧ ಧರ್ಮ ಸೇರಿದರು. ಆದಾಗ್ಯೂ, ದೇಶದಲ್ಲಿ ಬಹುಧರ್ಮಿಯರಿದ್ದು, ಎಲ್ಲರ ಹಿತವನ್ನು ಗಮನಿಸಿ ಸಂವಿಧಾನದಲ್ಲಿ ಏಕತೆಯನ್ನು ತಂದುಕೊಡುವ ಮೂಲಕ ಮಹಾನ್ ವ್ಯಕ್ತಿಯಾದರು. ಅದೇ ರೀತಿ ಹಿಂದೂ ಧರ್ಮಕ್ಕೆ ನಿಷ್ಠರಾಗಿದ್ದ ಡಾ. ಎಸ್. ರಾಧಾಕೃಷ್ಣನ್ ಅವರೂ ಸಹ ಮಹಾನ್ ನಾಯಕರು. ಹೀಗಾಗಿ ಮಹಾತ್ಮರನ್ನು ಯಾವುದೇ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ಅವರು ತಿಳಿಸಿದರು.
ಇಂದು ಧರ್ಮ, ಸಂಸ್ಕøತಿಗಳನ್ನು ಅಪವ್ಯಾಖ್ಯಾನ ಮಾಡಿ ಜನರನ್ನು ಭಾವೋದ್ರೇಕಗೊಳಿಸಲಾಗುತ್ತಿದೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ಆಗುವ ಅನ್ಯಾಯವನ್ನು ವಿರೋಧಿಸುವ ಮನಸ್ಸನ್ನು ಜನರಲ್ಲಿ ಬೆಳೆಸಬೇಕು. ಇಂದು ಆಸ್ತಿಕತೆ ಹಾಗೂ ನಾಸ್ತಿಕತೆಗಿಂತ ಪ್ರಾಮಾಣಿಕತೆ ಮುಖ್ಯವಾಗಬೇಕು. ನಾವು ಅರಿವನ್ನು ಬಯಸಿದರೆ, ಆಳ್ವಿಕರು ಮರೆವನ್ನು ಬಯಸುತ್ತಾರೆ. ಧರ್ಮದ ಮೂಲಕ ಭ್ರಮಾಲೋಕವನ್ನು ಸೃಷ್ಟಿಸುವ ಇಂತಹ ವಿದ್ಯಮಾನವನ್ನು ಆಧರಿಸಿಯೇ ಕಾರ್ಲ್‍ಮಾಕ್ರ್ಸ್ ಅವರು ‘ಧರ್ಮ ಅಫೀಮು’ ಎಂದು ಹೇಳಿದ್ದು. ಸೈದ್ದಾಂತಿಕ ರಾಜಕಾರಣಕ್ಕಿಂತ ಸಮಯಸಾಧಕ ರಾಜಕಾರಣ ಇಂದು ಮೇಲುಗೈ ಪಡೆದಿದೆ. ಇಂತಹ ಸಂದರ್ಭದಲ್ಲಿ ಹೋರಾಟಪರ ಸಂಘಟನೆಗಳು ತಮ್ಮ ಜೀವಪರವಾದ ಮೂಲ ಆಶಯ ಬಿಟ್ಟುಕೊಡದೇ ಸೈದ್ಧಾಂತಿಕ ಸಮನ್ವಯತೆಯನ್ನು ಸಾಧಿಸಿ ಹೋರಾಟವನ್ನು ಮುನ್ನಡೆಸಬೇಕು ಎಂದು ಅವರು ತಿಳಿಸಿದರು.
ಪ್ರಜಾಸತ್ತಾತ್ಮಕ ರಾಷ್ಟ್ರದ ಅಭಿವೃದ್ಧಿಗೆ ಖಾಸಗೀಕರಣ ಮಾರಕವಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳು ಖಾಸಗೀಯವರ ಕೈಗೆ ಸಿಲುಕಿ ಉದ್ಯಮವಾಗಿವೆ. ಈ ಕುರಿತು ಯುವಜನಾಂಗ ಖಾಸಗೀಕರಣದ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಕಳೆದ ಎರಡು ವರ್ಷಗಳ ಕೋವಿಡ್‍ನಿಂದ ಜನಸಾಮಾನ್ಯರು, ಬಡವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ಜನಸಾಮಾನ್ಯರ ಪಾಡು ಹಾಳಾಗಿದೆ. ಆದಾಗ್ಯೂ, ಕೋವಿಡ್ ಸಂದರ್ಭದಲ್ಲಿ ಉದ್ಯಮಿಗಳ ಆದಾಯ ಶೇಕಡಾ 30ಕ್ಕಿಂತ ಹೆಚ್ಚಾಗಿದೆ. ಇದನ್ನು ಯುವಜನಾಂಗ ಗಮನಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಯೌವನದ ಮಾನದಂಡ ಕೇವಲ ವಯಸ್ಸಿನ ಮಾನದಂಡದಿಂದ ಅಳೆಯದೇ, ಮನಸ್ಸಿನ ಮಾನದಂಡದಿಂದ ಅಳೆದರೆ ಎಲ್ಲರೂ ಯುವಜನರೇ ಆಗುತ್ತಾರೆ. ಅನ್ಯಾಯವನ್ನು ಪ್ರಶ್ನಿಸುವವರು ಯುವಜನರು. ನಿರುದ್ಯೋಗ, ಬೆಲೆ ಏರಿಕೆ ಹಾಗೂ ಸಾಂಸ್ಕೃತಿಕ ಅವನತಿಗಳ ವಿರುದ್ಧದ ಹೋರಾಟಕ್ಕೆ ಯುವಜನರನ್ನು ಸಜ್ಜುಗೊಳಿಸುವ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ಸಮ್ಮೇಳನ ಕೇವಲ ಯುವಜನ ಸಮ್ಮೇಳನವಲ್ಲ. ಇದು ಜನರೆಲ್ಲರ ಸಮ್ಮೇಳನ ಎಂದು ಅವರು ಬಣ್ಣಿಸಿದರು.
ಎಐಡಿವೈಓ ಅಖಿಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಅವರು ಮುಖ್ಯ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಎಸ್‍ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ಉಮಾ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾ. ಪ್ರತಿಭಾ ನಾಯಕ್ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಮೇಶ್ ಲಂಡನಕರ್ ಅವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಎಐಡಿವೈಓ ರಾಜ್ಯಾಧ್ಯಕ್ಷೆ ಎಂ. ಉಮಾದೇವಿ ಅವರು ವಹಿಸಿದ್ದರು.