ಧಾರ್ಮಿಕ ಪರಿಷತ್ ವಜಾಕ್ಕೆ ಆಗ್ರಹ

ಬೆಂಗಳೂರು, ಜೂ. ೬- ರಾಜ್ಯದಲ್ಲಿ ಧಾರ್ಮಿಕ ಪರಿಷತ್ತನ್ನು ರಚನೆ ಮಾಡಿದ್ದು, ಈ ಪರಿಷತ್‌ನಲ್ಲಿ ದೇವಸ್ಥಾನಗಳ ಬಗ್ಗೆ ಅರಿವೆಯೇ ಇಲ್ಲದ ಕೆಲವರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದು, ಧಾರ್ಮಿಕ ಪರಿಷತ್ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಆಗಮ ಪಂಡಿತರು, ವೇದ ಪಂಡಿತರು ವಿದ್ಯಾರ್ಹತೆ ಇಲ್ಲದೆ ಇರುವ ಸದಸ್ಯರುಗಳು ನಾವೇ ಸರ್ವಾಧಿಕಾರಿಗಳು ಎಂದು ಸರ್ಕಾರದ ಎಲ್ಲಾ ಕಾರ್ಯಗಳಿಗೆ ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯ ಧಾರ್ಮಿಕ ಪರಿಷತ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್‌ನ್ನು ವಜಾ ಮಾಡಬೇಕೆಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ- ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಹಾಗೂ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್ ಮನವಿ ಮಾಡಿದ್ದಾರೆ.
ದೇವಸ್ಥಾನದ ಎ ವರ್ಗ, ಬಿ ವರ್ಗ, ಸಿ ವರ್ಗದ ದೇವಾಲಯದ ವಂಶಪಾರಂಪರ್‍ಯ ಅರ್ಚಕರುಗಳಿಗೆ ಹಾಗೂ ಇದರಿಂದ ತೊಂದರೆಯಾಗುತ್ತಿದ್ದು, ಇವರುಗಳು ಹಸ್ತಕ್ಷೇಪ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಇರುವ ದೇವಾಲಯಗಳಿಗೆ ಭಕ್ತರುಗಳು ಬರುವುದು ತುಂಬಾ ವಿರಳವಾಗಿದೆ. ಅವರಿಗೆ ಇಷ್ಟ ಬಂದಹಾಗೆ ಕಾನೂನುಗಳನ್ನು ರಚಿಸಿಕೊಂಡು ಅಧಿಕಾರ ದರ್ಪ ಮಾಡಲು ಹೆಚ್ಚಾಗಿದ್ದು ಇದರಿಂದಿ ದೇವಸ್ಥಾನಗಳಲ್ಲಿ ಸಂಪ್ರದಾಯಗಳಿಗೆ ಭಂಗ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರುಗಳಿಗೆ ೬೦ ವರ್ಷ ವಯಸ್ಸಾಗುತ್ತಿದ್ದಂತೆ ನಿವೃತ್ತಿ ಗೊಳಿಸುತ್ತಿದ್ದು, ಇವರ ಸೇವೆಯನ್ನು ಮುಂದುವರಿಸಬೇಕು, ಗ್ರಾಮೀಣ ಪ್ರದೇಶದಲ್ಲಿರುವ ೩೫ ಸಾವಿರ ದೇವಾಲಯಗಳಿಗೆ ಪೂಜೆ ಸಾಮಾಗ್ರಿಗಳಿಗೆ ೫ ಸಾವಿರ ರೂ.ಗಳನ್ನು ನೀಡುತ್ತಿದ್ದು, ಇದನ್ನು ೧೦ ಸಾವಿರ ರೂ.ಗಳಿಗೆ ಹೆಚ್ಚಿಸಬೇಕು, ಮುಜರಾಯಿ ದೇವಾಲಯಗಳಿಗೆ ಖಾಸಗಿ ಟ್ರಸ್ಟ್ ಮಾಡಲು ಹಿಂದಿನ ಸರ್ಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ಅವಕಾಶ ನೀಡದೆ ಸರ್ಕಾರದ ಹಿಡಿತದಲ್ಲಿಯೇ ದೇವಾಲಯಗಳು ಇರಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಧಾರ್ಮಿಕದತ್ತಿ ಇಲಾಖೆಯಲ್ಲಿ ಸಾಕಷ್ಟು ನೌಕರರು ಇಲ್ಲದೆ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಶೀಘ್ರವಾಗಿ ನೌಕರರನ್ನು ನೇಮಕ ಮಾಡಿಕೊಡಬೇಕೆಂದು ಇದೇ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ಯವರಿಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.