ಧಾರ್ಮಿಕ ಜಾಗೃತಿ, ಹಿಂದುತ್ವ ಬಲ ಪಡಿಸಲು ಪಾದಯಾತ್ರೆ

ವಿಜಯಪುರ.ನ೬:ಕಳೆದ ೧೩ ವರ್ಷಗಳಿಂದ ತಿರುಮಲ-ತಿರುಪತಿ ಪಾದಯಾತ್ರೆಯನ್ನು ಸಾವಿರಾರು ಮಂದಿ ಸಹಮನಸ್ಕರೊಂದಿಗೆ ಸೇರಿಕೊಂಡು, ಮಾಡುತ್ತಿರುವುದು ಹಿಂದೂ ಧರ್ಮವನ್ನು ಜಾಗೃತಿಗೊಳಿಸುವುದರೊಂದಿಗೆ ಉಳಿಸಲಿಕ್ಕೋಸ್ಕರವಾಗಿ ಎಂದು ಪಾದಯಾತ್ರೆಯ ಸಂಚಾಲಕರಾದ ಕುಣಿಗಲ್ ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಂ ತಿಳಿಸಿದರು.
ಕುಣಿಗಲ್‌ನಿಂದ ತಿರುಮಲ ತಿರುಪತಿ ಪಾದಯಾತ್ರೆ ಸಮಿತಿಯ ನೇತೃತ್ವದಲ್ಲಿ ಹೊರಟಿದ್ದ ೬೦೦ ಕ್ಕೂ ಹೆಚ್ಚು ಪಾದಯಾತ್ರಿಗಳು ಇಲ್ಲಿನ ಸೀರ್ವಿ ಸಮಾಜದ ಸಹಕಾರದೊಂದಿಗೆ ದೇವನಹಳ್ಳಿ ರಸ್ತೆಯ ಸಮಾಜದ ಕಟ್ಟಡದಲ್ಲಿ ನಿತ್ಯ ಕರ್ಮಾದಿಗಳೊಂದಿಗೆ ಸ್ನಾನ ಮುಗಿಸಿ, ಅಡುಗೆ ಮಾಡಿ, ವಿಶ್ರಮಿಸಿಕೊಂಡು, ಪಾದಯಾತ್ರೆ ಮುಂದುವರಿಸಿದ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ತಿಳಿಸಿದರು.
ಸುಮಾರು ೩೨೦ ಕಿ.ಮೀ ನಷ್ಟು ಪಾದಯಾತ್ರೆ ಮಾಡುವುದರಿಂದ ಹಾದಿಯಲ್ಲಿ ಲಕ್ಷಾಂತರ ಮಂದಿಯ ಗಮನ ಸೆಳೆಯುವುದರೊಂದಿಗೆ ನೂರಾರು ಗ್ರಾಮಗಳು ಹತ್ತಾರು ಪಟ್ಟಣಗಳ ಜನತೆಯು ಗಮನಿಸಿ, ಎಲ್ಲರಿಗೂ ಹಿಂದೂ ಜಾಗೃತಿಯ ಬಗ್ಗೆ ಮನವರಿಕೆಯಾಗುವುದು ಎಂದು ತಿಳಿಸಿದರು.
ಇದಕ್ಕಾಗಿ ಯಾರಿಂದಲೂ ಯಾವುದೇ ಹಣ ಮತ್ತಿತರೆ ವಸ್ತುಗಳನ್ನು ತಾವು ಶುಲ್ಕವಾಗಿ ಪಡೆಯದೇ, ಭಾಗವಹಿಸುವವರೇ ಎಲ್ಲಾ ಖರ್ಚನ್ನು ಭರಿಸುವುದರೊಂದಿಗೆ ಬಹಳಷ್ಟು ಮಂದಿಗೆ ಉಚಿತವಾಗಿ ಎಲ್ಲಾ ಸೇವೆಯನ್ನು ನೀಡಲಾಗುವುದೆಂದು, ಮೊದಲಿಗೆ ಕೇವಲ ೧೫ ಮಂದಿಯಿಂದ ಪ್ರಾರಂಭವಾದ ಈ ಪಾದಯಾತ್ರೆ ಇದೀಗ ೩೦೦೦ ಮಂದಿಗೆ ಬೆಳೆದಿದ್ದು, ಕೊರೊನಾ ಸಂದರ್ಭವಾಗಿರುವ ಕಾರಣ ಈ ಬಾರಿ ೬೦ ವರ್ಷಕ್ಕೆ ಮೇಲ್ಪಟ್ಟ ಯಾರನ್ನೂ ಪಾದಯಾತ್ರೆಗೆ ಬರಲು ಅವಕಾಶ ಕಲ್ಪಿಸದ ಕಾರಣ ಕೇವಲ ೬೦೦ ಮಂದಿ ಹೊರಟಿದ್ದು, ಸುಮಾರು ೬೦ ಮಂದಿ ಮಹಿಳೆಯರು ಭಾಗವಹಿಸುತ್ತಿದ್ದು, ತಿರುಪತಿಯಲ್ಲಿ ಕೊನೆಯ ಹಂತದಲ್ಲಿ ೧೦೦೦ ಕ್ಕೂ ಹೆಚ್ಚು ಮಂದಿ ಸೇರ್ಪಡೆಗೊಳ್ಳುವರೆಂದು, ತಿಳಿಸಿದರು.
ದೇವನಹಳ್ಳಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರವಿಕುಮಾರ್ ಮಾತನಾಡಿ, ಪಾದಯಾತ್ರೆಯಿಂದ ನಮ್ಮಿಂದ ಮರೆಯಾಗುತ್ತಿರುವ ನಮ್ಮ ಸಂಸ್ಕಾರ-ಸಂಸ್ಕೃತಿಗಳು, ಹಳೆಯ ಪದ್ದತಿಗಳು ಜನತೆಗೆ ಗುರುತಿಸಲು ಸಾಧ್ಯವಾಗುತ್ತದೆ. ಕಳೆದ ನವೆಂಬರ್ ೩ ರಿಂದ ಪ್ರಾರಂಭವಾಗಿರುವ ಈ ಪಾದಯಾತ್ರೆ ೧೧ ರಂದು ಶ್ರೀನಿವಾಸನ ದರ್ಶನ ಪಡೆಯುವ ಮೂಲಕ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ಬಲಮುರಿ ಶ್ರೀನಿವಾಸ್ ಸೀರ್ವಿ ಸಮಾಜದ ಸಂಚಾಲಕ ಗಮ್ನಾರಾಂ ಮಾತನಾಡಿದರು.