ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಿವಿಧ ಊರುಗಳಿಗೆ ಉಚಿತ ಬಸ್‌ನಲ್ಲಿ ಪ್ರಯಾಣ ಮಾಡಲು ಮುಗಿ ಬಿದ್ದಿರುವ ಮಹಿಳೆಯರು.
ಬೆಂಗಳೂರು, ಜೂ.೧೭-ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಜಾರಿಗೆ ಬಂದ ಒಂದು ವಾರದಲ್ಲೇ ರಾಜ್ಯದ ವಿವಿಧಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ದಟ್ಟಣೆ ಹೆಚ್ಚಿದೆ. ಉಚಿತ ಬಸ್ ಸೌಲಭ್ಯವನ್ನು ಬಳಸಿಕೊಂಡಿರುವ ಮಹಿಳೆಯರು ತಮ್ಮ ಇಷ್ಟದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಹಲವು ಪ್ರಮುಖ ಧಾರ್ಮಿಕ ಸ್ಥಳಗಳು, ಪ್ರವಾಸಿ ಸ್ಥಳಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು ತಂಡೋಪತಂಡವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದು, ಬಹುತೇಕ ಬಸ್‌ಗಳು ತುಂಬಿತುಳುಕುತ್ತಿವೆ. ಪುರುಷರಿಗೆ ಸ್ಥಳವಕಾಶ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರಮುಖ ಧಾರ್ಮಿಕ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಕೊಲ್ಲೂರು, ಶೃಂಗೇರಿ, ಹೊರನಾಡು, ಸವದತ್ತಿ ಯಲ್ಲಮ್ಮ, ಬನಶಂಕರಿ ದೇವಾಲಯ, ಹಂಪಿ, ಮೈಸೂರು, ಬೇಲೂರು, ಹಾಸನ, ಉಡುಪಿ, ಬೆಳಗಾವಿ ಸೇರಿದಂತೆ ವಿವಿಧ ಪ್ರೌಆಸಿ ಸ್ಥಳಗಳಲ್ಲಿ ಮಹಿಳೆಯರ ದಟ್ಟಣೆ ಹೆಚ್ಚಿದೆ. ಇಂದು ಮತ್ತು ನಾಳೆ ರಜಾ ದಿನವಾಗಿದ್ದು, ರಾಜ್ಯದೆಲ್ಲೆಡೆ ಬಸ್ ನಿಲ್ದಾಣಗಳಲ್ಲಿ ಬಹುತೇಕ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ ಕಂಡು ಬಂತು. ಇಂದು ಮುಂಜಾನೆಯಿಂದಲೇ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಾಗರೋಪಾದಿಯಲ್ಲಿ ಮಹಿಳಾ ಭಕ್ತರು ಹರಿದು ಬಂದಿದ್ದಾರೆ.ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಎಲ್ಲ ಬಸ್‌ಗಳು ಸಂಪೂರ್ಣ ಭರ್ತಿಯಾಗಿವೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಿಂದ ಹೆಚ್ಚು ಮಹಿಳೆಯರು ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಜತೆಗೆ ಆಯಾ ಜಿಲ್ಲೆಗಳ ಪ್ರವಾಸಿ ಸ್ಥಾನಗಳಿಗೂ ಮಹಿಳೆಯರು ತೆರಳುತ್ತಿದ್ದು, ಬಹುತೇಕ ಎಲ್ಲ ಜಿಲ್ಲೆಗಳ ಪ್ರವಾಸಿಸ್ಥಳ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರದ್ದೇ ಪಾರುಪತ್ಯವಾಗಿದೆ.ಮಂಜುನಾಥ ಸ್ವಾಮಿಯ ದರ್ಶನ ಪಡೆದು ಕುಕ್ಕೆಯತ್ತ ತೆರಳುತ್ತಿರುವ ಮಹಿಳಾ ಭಕ್ತರು. ಹೀಗಾಗಿ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗೋ ಬಸ್ ಗಳಲ್ಲೂ ಮಹಿಳೆಯರಿಂದ ತುಂಬಿತ್ತು.ಮತ್ತೊಂದೆಡೆ ಬಾಗಲಕೋಟೆ, ಗದಗ, ಕಲಬುರಗಿ, ಚಿತ್ರದುರ್ಗ ಸೇರಿ ಕೆಲವೆಡೆ ಬಸ್ಸಿನ ಆಸನಗಳು ತುಂಬಿ ಬಸ್ಸಿನ ಬಾಗಿಲ ಬಳಿ ಜೋತು ಬಿದ್ದು, ಮಹಿಳೆಯರು ಪ್ರಯಾಣಿಸಿದರು. ಇಷ್ಟುದಿವಸ ಬಸ್ಸಿನಲ್ಲಿ ಆಸನಗಳನ್ನು ಹಿಡಿಯಲು ಕಿಟಕಿ ಮೂಲಕ ಕರವಸ್ತ್ರ ಹಾಕುತ್ತಿದ್ದ ಮಹಿಳೆಯರು, ಸೀಟ್ ಮೇಲಿದ್ದ ಕರವಸ್ತ್ರ ತೆಗೆದು ಕೂತರೆ ಎನ್ನುವ ಕಾರಣಕ್ಕೆ ಬಸ್ಸಿನ ಕಿಟಕಿಯಿಂದ ಮಕ್ಕಳನ್ನೇ ಒಳಗೆ ಇಳಿಸಿ ಆಸನ ಹಿಡಿಯಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ, ಆಸನಕ್ಕಾಗಿ ಬಸ್‌ಗಳಲ್ಲೇ ಮಹಿಳೆಯರ ಮಧ್ಯೆ ಮಾತಿನ ಜಟಾಪಟಿಗಳು ನಡೆದಿವೆ.ಒಟ್ಟಿನಲ್ಲಿ ಇಂದು ಮತ್ತು ಭಾನುವಾರ ರಜೆ ದಿನ ಹಿನ್ನೆಲೆ ಶಕ್ತಿ ಯೋಜನೆ ಮಹಿಳೆಯರು ಸದುಪಯೋಗಪಡಿಸಿಕೊಳ್ಳುತ್ತಿದ್ದು, ಧಾರ್ಮಿಕ ಸ್ಥಳ,ಪ್ರವಾಸಿ ತಾಣಗಳಿಗೆ ಹೋಗುವ ಎಲ್ಲ ಬಸ್‌ಗಳು ತುಂಬಿತುಳುಕುತ್ತಿವೆ.
ಪ್ರತಿದಿನ ೧ ಲಕ್ಷಕ್ಕೂ ಹೆಚ್ಚು ಪ್ರಯಾಣ
ಬಸ್‌ಗಳಲ್ಲಿ ಉಚಿತ ಪ್ರಯಾಣ ಘೋಷಣೆಯಾದ ನಂತರ ಪ್ರತಿದಿನ ಕಡಿಮೆ ಎಂದರೂ ಸಾರಿಗೆ ನಿಗಮದ ಎಲ್ಲ ಬಸ್‌ಗಳಲ್ಲಿ ಸರಾಸರಿ ಲಕ್ಷಾಂತರ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ.
ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆಯಲ್ಲಿಯೂ ಹೆಚ್ಚಾಗಿ ಬಂದಿರುವ ಭಕ್ತ ಸಮೂಹ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ತೀರ್ಥಕ್ಷೇತ್ರಗಳು, ಪ್ರವಾಸಿತಾಣಗಳಿಗೂ ಹೊಸ ಚೈತನ್ಯ ಬಂದಂತಾಗಿದೆ. ಉಚಿತ ಪ್ರಯಾಣದ ಪರಿಣಾಮ ಪ್ರವಾಸೋದ್ಯಮಕ್ಕೂ ಅನುಕೂಲವಾಗಿದೆ.
ಬಸ್ ಸಂಖ್ಯೆ ಹೆಚ್ಚಳಕ್ಕೆ ಆಗ್ರಹ…!
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದ ಬೆನ್ನಲ್ಲೇ, ರಾಜ್ಯದ ಬಹುತೇಕ ಕಡೆಗಳಲ್ಲಿ ಹೆಚ್ಚುವರಿ ಬಸ್‌ಗಳಿಗೆ ಬೇಡಿಕೆಯ ಕೂಗು ಕೇಳಿಬರುತ್ತಿದೆ. ನಾಲ್ಕೈದು ದಿನಗಳಿಂದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕೆಎಸ್‌ಆರ್‌ಟಿಸಿಗೆ ಬಸ್‌ಗಳ ಕೊರತೆ ಉಂಟಾಗಿದ್ದು, ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲು ಪ್ರಯಾಣಿಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.