ಧಾರ್ಮಿಕ ಕ್ಷೇತ್ರಕ್ಕೆ ಬಿಜೆಪಿ ಕೊಡುಗೆ ಅಪಾರ: ಶಾಸಕ ಸುಭಾಷ್ ಆರ್ ಗುತ್ತೇದಾರ

ಕಲಬುರಗಿ:ಮಾ.31:ದೇಶ ಮತ್ತು ರಾಜ್ಯದಲ್ಲಿನ ಪಾರಂಪರಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅಪಾರ ಕೊಡುಗೆಯನ್ನು ನೀಡಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಬುಧವಾರ ಆಳಂದ ತಾಲೂಕಿನ ಗಡಿಗ್ರಾಮ ಹೊದಲೂರ ಗ್ರಾಮದ ಶಿವಲಿಂಗೇಶ್ವರ ವಿರಕ್ತ ಮಠದ ಪ್ರಥಮ ಹಂತದ 50 ಲಕ್ಷ.ರೂ ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಮಠ, ಮಂದಿರಗಳ ಬಗ್ಗೆ ಅಪಾರವಾದ ಶ್ರದ್ಧೆ, ಭಕ್ತಿ ಹೊಂದಿದ್ದಾರೆ ಹೀಗಾಗಿ ಈ ಬಾರಿಯ ಆಯವ್ಯಯದಲ್ಲಿ ನಾಡಿನ ಧಾರ್ಮಿಕ ಕೇಂದ್ರಗಳಿಗೆ 600 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದರು.

ಈ ಅವಧಿಯ ಶಾಸಕತ್ವದಲ್ಲಿ ಹೊದಲೂರ ಗ್ರಾಮಕ್ಕೆ ಸುಮಾರು 7-8 ಕೋ. ರೂ.ಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರಿ ಮಾಡಲಾಗಿದೆ ಮುಂದೆಯೂ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ದಿ ಮಾಡಲಾಗುವುದು ಅದಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದು ನುಡಿದರು.

ಈ ದೇಶದ ಧರ್ಮ, ಸಂಸ್ಕøತಿಯನ್ನು ಎತ್ತಿ ಹಿಡಿಯುವಲ್ಲಿ ಅನೇಕ ಮಠ ಮಾನ್ಯಗಳು ಹಗಲಿರುಳು ಶ್ರಮಿಸುತ್ತಿವೆ ಇಂತಹ ಮಠಗಳ ಸಾಲಿನಲ್ಲಿ ಹೊದಲೂರ ಗ್ರಾಮದ ಶಿವಲಿಂಗೇಶ್ವರ ಮಠವು ಸೇರುತ್ತದೆ. ಗಡಿಯಲ್ಲಿದ್ದರೂ ಕೂಡ ಅಪಾರ ಪ್ರಮಾಣದ ಭಕ್ತ ಗಣವನ್ನು ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವವನ್ನು ಹೊದಲೂರಿನ ಶಿವಲಿಂಗೇಶ್ವರ ವಿರಕ್ತ ಮಠದ ವೃಷಭೇಂದ್ರ ಸ್ವಾಮೀಜಿ, ಸಮ್ಮುಖವನ್ನು ಅಕ್ಕಲಕೋಟ ವಿರಕ್ತಮಠದ ಬಸವಲಿಂಗ ಮಹಾಸ್ವಾಮಿ, ಅಧ್ಯಕ್ಷತೆಯನ್ನು ಉದಗೀರ, ಪಡಸಾವಳಿಯ ಶಂಭುಲಿಂಗ ಶಿವಾಚಾರ್ಯರು, ಉಪಸ್ಥಿತಿಯನ್ನು ಹತ್ತಿ ಕಣಮಸ್ ವಿರಕ್ತ ಮಠದ ಪ್ರಭುಶಾಂತ ಸ್ವಾಮೀಜಿ ಹಾಗೂ ಸಾನಿಧ್ಯವನ್ನು ನಂದಗಾಂವ ವಿರಕ್ತಮಠದ ರಾಜಶೇಖರ ಸ್ವಾಮೀಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ತಾ.ಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಮುಖಂಡರಾದ ಮಲ್ಲಿಕಾರ್ಜುನ ಕಂದಗೂಳೆ, ವೀರಭದ್ರಪ್ಪ ಖೂನೆ, ಶರಣಪ್ಪ ಹೊಸಮನೆ, ಶರಣು ಮುರುಮೆ, ಶಿವರಾಜ ಪಾಟೀಲ, ಮಹೇಶ ಪಾಟೀಲ, ಕಾಶಿನಾಥ ಪಾಟೀಲ ಸೇರಿದಂತೆ ಇತರರು ಇದ್ದರು.