ಧಾರ್ಮಿಕ ಕೇಂದ್ರಗಳ ರಕ್ಷಣೆಗೆ ಹೊಸ ಕಾಯ್ದೆ ಜಾರಿ

ಬೆಂಗಳೂರು, ಸೆ. ೨೦- ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿರುವ ದೇವಾಲಯಗಳನ್ನು ತೆರವು ಮಾಡುವ ವಿಚಾರ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ಸಂರಕ್ಷಿಸಲು ಹೊಸ ಕಾಯ್ದೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ದೇಗುಲಗಳನ್ನು ತೆರವು ಮಾಡದಿರುವ ತೀರ್ಮಾನ ಕೈಗೊಳ್ಳಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿರುವ ಧಾರ್ಮಿಕ ಕೇಂದ್ರಗಳ ಸಂರಕ್ಷಣೆಗೆ ಪ್ರತ್ಯೇಕ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸುವ ತೀರ್ಮಾನ ಕೈಗೊಳ್ಳಲಾಗಿದೆ.
ದೇವಾಲಯಗಳ ರಕ್ಷಣೆಗೆ ಹೊಸ ಕಾಯ್ದೆ ರೂಪಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆದು ವಿಧೇಯಕವನ್ನು ಜಾರಿ ಮಂಡಿಸಿ ಹೊಸ ಕಾಯ್ದೆ ಜಾರಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ದೇವಾಲಯಗಳ ರಕ್ಷಣೆ ಸಂಬಂಧ ಇಂದೇ ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸುವ ಬಗ್ಗೆಯೂ ಚರ್ಚೆ ನಡೆದಿದ್ದು, ಬಹುಶಃ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ದೇವಾಲಯಗಳ ರಕ್ಷಣೆಯ ಹೊಸ ಕಾಯ್ದೆಯನ್ನು ಮಂಡಿಸುವ ಸಾಧ್ಯತೆಗಳು ಇವೆ.
ಈ ನೂತನ ಕಾಯ್ದೆಯಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೆ ತಡೆ ಹಾಕಿ ದೇಗುಲ ಮತ್ತು ಧಾರ್ಮಿಕ ಸಂರಕ್ಷಿಸುವ ಅಂಶಗಳಿವೆ ಎಂದು ಹೇಳಲಾಗಿದೆ.
ಈ ಮೊದಲು ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿರುವ ದೇಗುಲಗಳ ತೆರವಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿತ್ತು. ಆದರೆ ಅದರ ಬದಲು ಹೊಸ ಕಾಯ್ದೆ ಜಾರಿ ಮಾಡುವುದು ಸೂಕ್ತ ಎಂಬ ಕಾನೂನು ತಜ್ಞರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಧಾರ್ಮಿಕ ಕೇಂದ್ರಗಳ ಸಂರಕ್ಷಣೆಗೆ ಹೊಸ ಕಾಯ್ದೆಯನ್ನು ಜಾರಿ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರುಗಳು ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಜಿಲ್ಲಾಡಳಿತಗಳು ಪಟ್ಟಿ ಮಾಡಿರುವುದನ್ನು ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳಿಗೆ ಸದ್ಯಕ್ಕೆ ತೆರವು ಬೇಡ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿ ಎಂದು ಹಲವು ಸಚಿವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು ಎಂದು ಹೇಳಲಾಗಿದೆ.
ರಾಜ್ಯದಲ್ಲಿ ದೇವಾಲಯಗಳ ತೆರವು ವಿಚಾರ ವಿವಾದದ ಸ್ವರೂಪ ಪಡೆದು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದವು.
ಈ ಬೆನ್ನಲ್ಲೆ ಎಚ್ಚೆತ್ತುಕೊಂಡ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ನಿರ್ದೇಶನ ಬರುವವರೆಗೂ ದೇವಾಲಯಗಳ ತೆರವು ಮಾಡದಂತೆ ಕಳೆದ ವಾರ ಸೂಚನೆ ನೀಡಿತ್ತು.
ಈಗ ಹೊಸ ಕಾಯ್ದೆ ಮೂಲಕ ದೇವಾಲಯಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಿದೆ.
ನಂಜನಗೂಡಿನಲ್ಲಿ ತೆರವುಗೊಳಿಸಿರುವ ಹುಚ್ಚುಗಣಿ ದೇವಿಯ ದೇವಸ್ಥಾನವನ್ನು ಮರು ನಿರ್ಮಾಣದ ಹೊಣೆಯನ್ನು ಬಿಜೆಪಿ ಪಕ್ಷವೇ ಹೊರಲಿದ್ದು, ಬಿಜೆಪಿಯೇ ನಂಜನಗೂಡಿನಲ್ಲಿ ಈ ದೇವಾಲಯದ ಮರು ನಿರ್ಮಾಣ ಕಾರ್ಯ ಮಾಡಲಿದೆ ಎಂದು ಹೇಳಲಾಗಿದೆ.