ಧಾರ್ಮಿಕ ಕೇಂದ್ರಗಳಿಂದ ಶಾಂತಿ-ನೆಮ್ಮದಿ ಪ್ರಾಪ್ತಿ

ಕೊರಟಗೆರೆ, ಮಾ. ೨೩- ಧರ್ಮಗಳು ಮನುಷ್ಯನ ಜೀವನದಲ್ಲಿ ಒಳ್ಳೆಯ ಮಾರ್ಗಗಳನ್ನು ತೋರಿಸುತ್ತಿದ್ದು, ಧಾರ್ಮಿಕ ಶ್ರದ್ದಾ ಕೇಂದ್ರಗಳು ಅವುಗಳ ಕೇಂದ್ರ ಬಿಂದುಗಳಾಗಿವೆ ಎಂದು ಶಾಸಕ ಡಾ. ಜಿ. ಪರಮೇಶ್ವರ್ ತಿಳಿಸಿದರು.
ತಾಲ್ಲೂಕಿನ ರಾಯವಾರ, ದೊಡ್ಡಸಾಗ್ಗೆರೆ, ಅಜ್ಜಿಹಳ್ಳಿ ಗ್ರಾಮಗಳಲ್ಲಿ ದೇವಸ್ಥಾನಗಳ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಲೊಂಡು ಮಾತನಾಡಿ, ಮನುಷ್ಯನಲ್ಲಿ ಮನಸ್ಥಿತಿ ಮತ್ತು ಮನಸು ಸ್ಥಿರವಾಗಿದ್ದರೆ ಜೀವನದಲ್ಲಿ ಸಂತೋಷ ಕಾಣಬಹುದು. ನಾವು ಜನರನ್ನು ಕಾಣುವ ರೀತಿಯ ಮೇಲೆ ನಮ್ಮಗಳನ್ನು ಜನರು ಅಳೆದು ತೂಗುತ್ತಾರೆ. ಭಾರತವು ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ದೇವರನ್ನು ನಂಬದೇ ಇರುವವರು ಸಹ ಈ ಜಗತ್ತಿನಲ್ಲಿದ್ದಾರೆ. ಪ್ರಸ್ತುತವಾಗಿ ಪ್ರಪಂಚದೆಲ್ಲೆಡೆ ಕೋವಿಡ್ ಆವರಿಸಿಕೊಂಡಿದೆ. ಅವುಗಳನೆಲ್ಲಾ ಮುಕ್ತವಾಗಿಸುವ ನಿಟ್ಟಿನಲ್ಲಿ ಮನುಷ್ಯನ ಪ್ರಯತ್ನ ಸಾಗಬೇಕಿದ್ದು, ಧಾರ್ಮಿಕ ಕೇಂದ್ರಗಳು ಮನುಷ್ಯನಿಗೆ ಮಾನಸಿಕ ಶಕ್ತಿಯನ್ನು ನೀಡುತ್ತದೆ. ಕ್ಷೇತ್ರದಾದ್ಯಾಂತ ಧಾರ್ಮಿಕ ಕೇಂದ್ರಗಳು ಹೆಚ್ಚುತ್ತಿದ್ದು, ಜನರ ನಂಬಿಕೆ ಅದರಲ್ಲಿ ಪ್ರಮುಖವಾಗಿ ಅಡಗಿದೆ ಎಂದರು.
ಅಜ್ಜಿಹಳ್ಳಿ ಗ್ರಾಮದ ಆಧಿಶಕ್ತಿ ಕೆಂಪಮ್ಮ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟ ಕ್ಷೇತ್ರದ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಮನುಷ್ಯನ ಜೀವನ ಅತ್ಯಂತ ಒತ್ತಡ ಮತ್ತು ಯಾಂತ್ರಿಕತೆಯಿಂದ ಕೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಧಾರ್ಮಿಕ ಕೇಂಧ್ರಗಳು ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಆಧುನಿಕ ಕಾಲದಲ್ಲಿ ಮನುಷ್ಯನಲ್ಲಿ ಪಾಪ, ಪುಣ್ಯ ಪ್ರಜ್ಞೆಗಳು ಹಂತಹಂತವಾಗಿ ನಶಿಸುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಮತ್ತು ಅನ್ಯಾಯಗಳು ಹೆಚ್ಚಾಗುತ್ತಿವೆ. ಇವುಗಳನ್ನು ತಡೆಗಟ್ಟಲು ಧರ್ಮ ಮತ್ತು ಧಾರ್ಮಿಕ ಕೇಂದ್ರಗಳ ಕಡೆ ಮನುಷ್ಯನು ಹೆಚ್ಚು ಕೇಂದ್ರುಕೃತವಾಗಲು ದೇವಾಲಯಗಳು ನಿರ್ಮಾಣವಾಗುತ್ತಿವೆ. ಪ್ರತಿ ಹಿಂದು ದೇವರುಗಳು ಕೈಯಲ್ಲಿ ಆಯುದವಿರುತ್ತದೆ. ಇದು ಸಮಾಜದಲ್ಲಿ ಪಾಪ ಮಾಡುವವರನ್ನು ಶಿಕ್ಷಿಸಲು ಎನ್ನುವ ಪ್ರತೀತಿ ಇದ್ದು, ಮನುಷ್ಯನ್ನು ಧರ್ಮದೆಡೆಗೆ ಹೋಗುವಂತೆ ಮಾಡುತ್ತದೆ. ಈ ದೇವಾಲಯದ ನಿರ್ಮಾಣಕ್ಕೆ ಅನೇಕರು ಶ್ರಮವಹಿಸಿದ್ದು ಅವರ ಶ್ರಮ ಸಾರ್ಥಕವಾಗಲಿ ಎಂದರು.
ಈ ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ರಾಮಯ್ಯ, ಸದಸ್ಯೆ ಸುಮಾರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವಥನಾರಾಯಣ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಬಿ.ಎಸ್., ಪ.ಪಂ ಸದಸ್ಯ ಎ.ಡಿ ಬಲರಾಮಯ್ಯ, ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಸಿದ್ದಗಂಗಮ್ಮ, ಸದಸ್ಯರುಗಳಾದ ಪ್ರಭಾಕರ್, ಕರಿಯಣ್ಣ, ಮಂಜುನಾಥ್ ಕೆ.ಎಲ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‌ಕುಮಾರ್, ಪ್ರಧಾನ ಅರ್ಚಕ ಹನುಮಂತರಾಯಪ್ಪ, ಮುಖಂಡರುಗಳಾದ ಬಸವರಾಜು, ಅಶ್ವಥನಾರಾಯಣರಾಜು, ಮಹೇಶ್, ನಂದೀಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.