ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪ್ರವೇಶ ನಿಷೇಧ

ಕೆಜಿಎಫ್.ಏ.೨೩: ಎಲ್ಲೆಲ್ಲೂ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ
ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕೋವಿಡ್ ನಿಯಮಾವಳಿಗಳನ್ವಯ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲು ಸಹಕರಿಸಬೇಕೆಂದು ಧಾರ್ಮಿಕ ಕಾರ್ಯಗಳನ್ನು ಸರ್ಕಾರದ ಆದೇಶದಂತೆ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಕರೆ ನೀಡಿದರು.
ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಲ್ಲಾ ಧರ್ಮಗಳ ಮುಖಂಡರುಗಳ ಶಾಂತಿ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಇದುವರೆವಿಗೂ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಎಲ್ಲಾ ಸಮುದಾಯದವರು ಧಾರ್ಮಿಕ ಕಾರ್ಯಗಳನ್ನು ಆಚರಿಸಿಕೊಂಡು ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ, ಅದೇ ರೀತಿ ಈ ಬಾರಿ ಕೋವಿಡ್ ನಿಯಮಾವಳಿಗಳನ್ವಯಕಡ್ಡಾಯವಾಗಿ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿ, ಪೂಜೆ, ಧಾರ್ಮಿಕ ಕಾರ್ಯಗಳನ್ನು ಮಾತ್ರ ಮಾಡಿಕೊಂಡೋಗಲು ಸಹಕರಿಸಬೇಕೆಂದು ಜಿಲ್ಲಾ ಎಸ್ಪಿ ಇಲಕ್ಕಿಯಾ ಕರುಣಾಕರನ್ ಅವರು ಕೋರಿದರು.
ಡಿವೈಎಸ್ಪಿ ಬಿ.ಕೆ. ಉಮೇಶ್ ಅವರು ಮಾತನಾಡಿ, ಧಾರ್ಮಿಕ ಕೇಂದ್ರಗಳ ಬಳಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದಿಸೆಯಲ್ಲಿ ಯಾವುದೇ ಕಾರ್ಯಕ್ರಮ ಅನಿವಾರ್ಯ ನಡೆಸಬೇಕಾದರೂ ನಿಯಮಾನುಸಾರ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿಯನ್ನು ಪಡೆದು ಕಾರ್ಯಕ್ರಮವನ್ನು ನಿಯಮಾನುಸಾರ ನಡೆಸುವಂತೆ ಕರೆ ನೀಡಿದರು.
ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕರೆ ನೀಡಿದರು.ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕುಗಳ ವಿವಿಧ ಹಿಂದು ಸಂಘಟನೆಗಳವರು, ಮುಸ್ಲಿಂ ಹಾಗೂ ಕ್ರಿಸ್ಚಿಯನ್ ಸಮುದಾಯದವರು ಸಭೆಯಲ್ಲಿ ಭಾಗವಹಿಸಿದ್ದು, ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಧಾರ್ಮಿಕ ಪದ್ದತಿಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ, ಯಾವುದೇ ರೀತಿಯಲ್ಲೂ ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಸಂಘಟಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಕೆ. ನಾಗರಾಜ್, ವೆಂಕಟರಮಣಪ್ಪ, ಆರ್‍ಪಿಐ ವಿ. ಸೋಮಶೇಖರ್, ಪಿಎಸ್‌ಐ ಆನಂದಬಾಬು, ನವೀನ್ ಹಾಜರಿದ್ದರು.