ಧಾರ್ಮಿಕ ಕಾರ್ಯಗಳಿಂದ ಸೌಹಾರ್ದತೆ

ಕೋಲಾರ,ಸೆ೩:ಧಾರ್ಮಿಕ ಕಾರ್ಯಗಳು ಸಮಾಜದಲ್ಲಿ ಸೌಹಾರ್ದತೆ ಮೂಡಿಸುವುದರ ಜತೆಗೆ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುವಂತೆ ಮಾಡುತ್ತದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕೋಲಾರದ ಗಾಂಧಿನಗರದಲ್ಲಿ ವಿನಾಯಕ ಮಿತ್ರಬಳಗ ಹಮ್ಮಿಕೊಂಡಿದ್ದ ಗಣೇಶೋತ್ಸವದಲ್ಲಿ ಪಾಲ್ಗೊಂಡು ನೂರಾರು ಶಾಲಾ ಮಕ್ಕಳಿಗೆ ಅವರೇ ಶಾಲಾ ಬ್ಯಾಗ್ ಹಾಗೂ ಊಟದ ತಟ್ಟೆ,ಲೋಟ ಕೊಡುಗೆಯಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.
ಗಣೇಶೋತ್ಸವದ ಹೆಸರಿನಲ್ಲಿ ಸಂಘಟಿತರಾಗುವ ಯುವಕರು ತಮ್ಮನ್ನು ಇಂತಹ ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು, ದುಶ್ಚಟಗಳಿಂದ ದೂರವಿದ್ದು, ಸಮಾಜದಲ್ಲಿ ಶೋಷಿತರಿಗೆ,ಬಡವರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶೋಷಿತ ಸಮುದಾಯಗಳಿಗೆ ಶಿಕ್ಷಣವೇ ಬದುಕಿನ ಅಸ್ತ್ರವಾಗಿದೆ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತಲೂ ಚಿಂತನೆ ನಡೆಸಬೇಕು, ಮಕ್ಕಳು ದೇಶದ ಆಸ್ತಿಯಾಗುವಂತೆ ಅವರನ್ನು ಬೆಳೆಸಬೇಕಲು ಎಂದರು.
ಸಮಾಜದಲ್ಲಿ ಕೋಮು,ಜಾತಿಗಳ ನಡುವೆ ಸೌಹಾರ್ದತೆ ಮೂಡಿಸಲು ಗಣೇಶೋತ್ಸವ ಕಾರಣವಾಗಲಿ ಎಂದು ಆಶಿಸಿದ ಅವರು, ಎಲ್ಲಾ ಜಾತಿ,ಧರ್ಮಗಳುಸೇರಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು, ನಾವೆಲ್ಲಾ ಭಾರತೀಯರು ಎಂಬುದು ನಮ್ಮ ಮೊದಲ ಧ್ವನಿಯಾಗಿರಬೇಕು ಎಂದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ, ಆದರೂ ಕೆಲವು ಕಡೆಗಳಲ್ಲಿ ಅತಿವೃಷ್ಟಿಯ ಆತಂಕ ಕಾಡುತ್ತಿದೆ, ಗಣೇಶ ಅನಾಹುತಗಳಿಗೆ ಅವಕಾಶ ನೀಡದೇ ಎಲ್ಲರಿಗೂ ಸಂತಸ,ಸಂಮೃದ್ದಿ ತರುವಂತೆ ಹರಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್,ಎಸ್ಟಿಘಟಕದ ಅಧ್ಯಕ್ಷ ನಾಗರಾಜ್, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು, ವಿನಾಯಕ ಮಿತ್ರಬಳಗದ ಅಧ್ಯಕ್ಷ ಗಂಗೋಲಿ, ಮುಖಂಡರಾದ ದಲಿತನಾರಾಯಣಸ್ವಾಮಿ, ರಾಮಚಂದ್ರ, ವೆಂಕಟೇಶ್, ಚಿನ್ನಿ ಉಪಸ್ಥಿತರಿದ್ದರು.