ಧಾರ್ಮಿಕ ಕಾರ್ಯಕ್ರಮದಿಂದ ಮನಸ್ಸಿಗೆ ನೆಮ್ಮದಿ

ನರೇಗಲ್ಲ, ಜ 10- ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯನಿಗೆ ಸಮಾಧಾನ ಸಂತೋಷ ನೀಡುವುದರ ಜತೆಗೆ ವ್ಯಕ್ತಿಯನ್ನು ಉತ್ತಮ ಕಾರ್ಯಗಳಲ್ಲಿ ತೊಡಗಿಸುತ್ತಿದೆ. ಧರ್ಮ ಭಾರತೀಯರ ಕಣ ಕಣದಲ್ಲಿದೆ. ಯಾರು ಧರ್ಮವನ್ನು ರಕ್ಷಿಸುತ್ತಾರೆ ಅಂಥವರನ್ನು ಧರ್ಮ ರಕ್ಷಿಸುತ್ತದೆ ಎಂದು ಪ.ಪಂ ಸದಸ್ಯ ಈರಪ್ಪ ಜೋಗಿ ಹೇಳಿದರು.
ಪಟ್ಟಣದ ಕೊಂಡಿಯವರ ಓಣಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಶನಿವಾರ ಜರುಗಿದ ಕುಂಭ, ಕಳಸ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿ ಸಾರ್ಥಕ ಜೀವನ ನಡೆಸಬೇಕು. ಆರ್ಥಿಕವಾಗಿ ಸದೃಢವಾಗಿದ್ದವರು, ದಾನ, ಧರ್ಮ ಮಾಡಿ ಪರಮಾತ್ಮನ ಮೆಚ್ಚುಗೆಗೆ ಪಾತ್ರರಾಗಬೇಕು. ಬಡ, ಮಧ್ಯಮ ವರ್ಗದವರಿಗೆ ಸಹಾಯ ನೀಡಿ ಸತ್ಕಾರ್ಯಗಳನ್ನು ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ಪುರಾತನ ದೇವಸ್ಥಾನಗಳನ್ನು ರಕ್ಷಣೆ ಮಾಡುವುದರ ಜತೆಗೆ ಅವುಗಳ ಜೀರ್ಣೋಧಾರ ಕಾರ್ಯಗಳಲ್ಲಿ ಯುವಕರು ತೊಡಗಬೇಕು. ಇದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ, ಧಾರ್ಮಿಕ ಮನೋಭಾವನೆ ಹೆಚ್ಚಾಗುತ್ತದೆ. ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆಗಾಗಿ ಹಮ್ಮಿಕೊಂಡಿದ್ದ ಕುಂಭ ಮೆರವಣಿಗೆಯಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು ಮಾದರಿಯಾಗಿದೆ ಎಂದರು.
ಕುಂಭ, ಕಳಸ, ಪಾಲಕಿ ಮೆರವಣಿಗೆಯು ಬೀರಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ವೀರಣ್ಣನ ಪಾದಗಟ್ಟಿ, ಮಾರೇಮ್ಮನ ದೇವಸ್ಥಾನ, ಹಳೆ ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್, ಹೊಸ ಬಸ್ ನಿಲ್ದಾಣ, ಪ.ಪಂ ಕಾರ್ಯಾಯಲದ ಮುಂದೆ, ಗ್ರಾಮದೇವತೆ ದೇವಸ್ಥಾನ, ಗಣೇಶ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನದ ಮೂಲಕ ಬೀರಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿತು.
ನಿಂಗಪ್ಪ ಹೊನ್ನಾಪೂರ, ಯಲ್ಲಪ್ಪ ಕುರಿ, ಮೈಲಾರಪ್ಪ ಗೋಡಿ, ಕುಬೇರಪ್ಪ ಜೋಗಿ, ಹನಮಪ್ಪ ಬೇಲೇರಿ, ಹನಮಂತಪ್ಪ ಕುರಿ, ಭೀಮಪ್ಪ ಕೊಂಡಿ, ಮಾಶಪ್ಪ ಕೊಂಡಿ, ಸಿದ್ಧಪ್ಪ ಕೊಂಡಿ, ಹನಮಪ್ಪ ಕೊಂಡಿ, ರಾಜು ಜೋಗಿ ಸೇರಿದಂತೆ ಕುಂಭ ಮೆರವಣಿಗೆಯಲ್ಲಿ 200ಕ್ಕೂ ಅಧಿಕ ಮೆಹಿಳೆಯರು ಪಾಲ್ಗೊಂಡಿದ್ದರು.