ಧಾರ್ಮಿಕ ಕಾರ್ಯಕ್ಕೆ ಒಗ್ಗೂಡಿಸುವ ಶಕ್ತಿ ಇದೆ

ಕೊರಟಗೆರೆ, ನ. ೨೨- ಧಾರ್ಮಿಕ ಕಾರ್ಯಕ್ರಮಕ್ಕೆ ಒಗ್ಗೂಡಿಸುವಂತಹ ಶಕ್ತಿಯಿದೆ. ಇದರಿಂದಲೇ ನಮ್ಮ ಪೂರ್ವಿಕರು ಈ ರೀತಿಯಲ್ಲಿ ಆಚರಣೆಗಳನ್ನು ರೂಢಿಯಲ್ಲಿಟ್ಟಿದ್ದಾರೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನೀಲಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತಂಗನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಮುತ್ತರಾಯಸ್ವಾಮಿ ದೇವಾಲಯದ ಜೀರ್ಣೋದ್ದಾರ ಮತ್ತು ಕುಂಬಕಳಸ ಪ್ರತಿಷ್ಠಾಪನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮದಲ್ಲಿಯೂ ದೇವಾಲಯಗಳಿದ್ದು ಅವುಗಳಲ್ಲಿ ಗ್ರಾಮ ದೇವತೆಗಳು, ಮನೆ ದೇವರುಗಳು, ಕುಲ ದೇವರುಗಳು ಪ್ರತಿಯೊಂದಕ್ಕೂ ಅದರದೇ ಆದ ಮಹತ್ವವಿದ್ದು ಇವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದರು.
ಸಿದ್ದಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸುಮ್ಮನೆ ಇರುವಂತಹ ಕಲ್ಲಿಗೆ ಯಾರೂ ಪೂಜೆಯನ್ನು ಮಾಡುವುದಿಲ್ಲ. ಆದರೆ ಅದೊಂದು ಶಿಲೆಯಾಗಿ ದೇವರ ಮೂರ್ತಿಯಾಗಿ ಪರಿವರ್ತನೆಯಾಗಿ ಪ್ರತಿಷ್ಠಾಪನೆಯಾದರೆ ಅದು ಶಕ್ತಿ ಪಡೆಯುತ್ತದೆ. ಇದರ ಮೇಲೆ ಬೀಳುವಂತಹ ಅಭಿಷೇಕ, ನೀರು, ಹೂವುಗಳು ಶಕ್ತಿಯನ್ನು ಪಡೆದುಕೊಂಡು ಪ್ರಸಾದಗಳಾಗುತ್ತವೆ. ಈ ನಿಟ್ಟಿನಲ್ಲಿ ನಾವು ದೇವಾಲಯಗಳಿಗೆ ಇರುವಂತಹ ಮಹತ್ವವನ್ನು ಅರಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ಗಣಪತಿ ಹೋಮ, ರುದ್ರಹೋಮ, ಕಳಶಾರಾರಾದನೆ, ಹಲವು ಹೋಮ-ಹವನಗಳನ್ನು ನಡೆಸಲಾಯಿತು. ಗ್ರಾಮದ ಮಹಿಳೆಯರಿಂದ ಗ್ರಾಮಾದ್ಯಂತ ಕುಂಬ ಕಳಶ ಮೆರವಣೆಗೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಜಿ.ಆರ್. ಶಿವರಾಮಯ್ಯ, ಪ್ರೇಮಾ ಮಹಾಲಿಂಗಪ್ಪ, ತಾ.ಪಂ. ಸದಸ್ಯ ಬೋರಣ್ಣ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಆರ್ ರಾಜಣ್ಣ, ಗ್ರಾಮದ ಮುಖಂಡರಾದ ಶಿವಲಿಂಗಯ್ಯ, ತಿಮ್ಮರಾಜು, ರಾಮಚಂದ್ರಯ್ಯ, ರಾಜಣ್ಣ, ಉಮೇಶ್, ಜಯಣ್ಣ, ತಿಮ್ಮರಾಜು ಮತ್ತಿತರರು ಉಪಸ್ಥಿತರಿದ್ದರು.